ದಾಂಪತ್ಯ ಗೀತೆ
ಬೆಳಕ ಬಿತ್ತಿ ಬೆಳಕ ಉಣ್ಣಲು ಹೋದೆವು
ನಿಧಾನವಾಗಿ ಕತ್ತಲು ಆವರಿಸಿತು
ಮತ್ತೆ ಆಕಾಶವನ್ನೊಮ್ಮೆ ನೋಡಿದೆವು
ಇದ್ದಷ್ಟು ಚುಕ್ಕೆಗಳೂ ಮೋಡದೊಳಗೆ ಕುಳಿತು
ಬೆಳಕಿಗಾಗಿ ಹಂಬಲಿಸುತ್ತಿದ್ದವು!
ಬಾಲ್ಯದಲ್ಲಿ ಕಂಡ ಹುಣ್ಣಿಮೆ
ಚಂದಿರನ ಅಂಗಳ ಇನ್ನಷ್ಟು ಧೂಳಾಗಿತ್ತು
ಆದರೂ ಬಾಳನ್ನು ಪ್ರೀತಿಸಿ ಗೆಲ್ಲು ಎಂದ ಸಂತರ ದಾರಿಯನ್ನು ಹಿಡಿದು ಹೊರಟೆವು
ಅಲ್ಲಿಯೂ ಅದರದೇ ಕಷ್ಟಗಳು ಆವರಿಸಿದವು
ಒಂದಲ್ಲ
ಎರಡಲ್ಲ
ಆ…ಹನ್ನೆರೆಡು ವರ್ಷಗಳ ವನವಾಸ!?
ಯಾರೂ ಸುಖಿ ಎನ್ನಲಿಲ್ಲ
ಯಾರೂ ದುಃಖಿ ಎನ್ನಲಿಲ್ಲ
ಗಿಡದಲ್ಲಿ ಹೂವ ಬಿಡಿಸಲು ಹೋದರೆ
ಮುಳ್ಳುಗಳು ತಾಗುತ್ತಿದ್ದವು
ಮರದ ಹಣ್ಣು ಪಡೆಯಲು ಹೋದರೆ
ಮಣ್ಣಲ್ಲಿ ಬಿದ್ದು ಅವೂ ಬೀಜವಾಗಿದ್ದವು
ಇದ್ದಷ್ಟು ಪಡೆದು ಅದೇ ಕರುಳಬೀಜವನ್ನೊತ್ತು ಯಾವು ಯಾವುದೋ ಊರ ಸುತ್ತಿ ಬಂದೆವು
ಮನೆ ಮಠವನ್ನೊತ್ತು ಸಾಗಿನಿಂತೆವು
ದೇಗುಲದಲ್ಲಿ ಹಚ್ಚಿದ ಅವಳ ದೀಪವ
ಇನ್ನಾರೋ ಎಣ್ಣೆಬತ್ತಿಯನ್ನಿಟ್ಟು ಅಲ್ಲಲ್ಲಿ ಬೆಳಕು ಮಾಡಿರಬಹುದು
ನಾವು ಉಂಡು ಬೆಳೆದುಬಂದ ಮನೆಯೆಂಬೋ ಬಾಡಿಗೆ ಮನೆಯನ್ನು
ಇನ್ನಾರೋ ಅಂದಗೊಳಿಸಿರಲೂಬಹುದು
ಪ್ರೀತಿಸುತ್ತಲೇ ಜಗಳ ಕಾದು ಮಾತುಬಿಟ್ಟ ಮನಸ್ಸುಗಳು
ಹಬ್ಬದಡಿಗೆಯನ್ನು ಮತ್ತೊಬ್ಬರಿಗೆ ಹಂಚಿರಬಹುದು
ಈಗ ನೆನಪುಗಳಷ್ಟೇ ಉಳಿದು
ಮುಂದಿನ ದಾರಿಯನ್ನು ಹಿಗ್ಗಿಸುತ್ತಿವೆ
ಧಾರವಾಡದ ಹೆಜ್ಜೆಗಳಲ್ಲೇ ಈಗ
ನಮ್ಮ ಮಗನ ಹೆಜ್ಜೆಯೂ ಸೇರಿ
ಬೆಳಗಿನ ಸಂಗೀತವ ನುಡಿಸುತ್ತಿವೆ
ನಮ್ಮ ದಾಂಪತ್ಯಕ್ಕೀಗ ಇಪ್ಪತ್ತು!!
ತಾರುಣ್ಯದ ತಂಬೆಲರು
ಮುಪ್ಪು ಎಂದರೂ
ಅರ್ಧ ಶತಮಾನಕ್ಕೆ ಹೊಂದಿಕೊಳ್ಳುತ್ತಿರುವ ಜೀವದಸಿರು
ಶಾಲ್ಮಲೆಯಂತೆ ನಾವು
ನಮ್ಮಂತೆಯೇ ಶಾಲ್ಮಲೆ.
-ಡಾ.ನಿಂಗಪ್ಪ ಮುದೇನೂರು, ಧಾರವಾಡ
*****