ನೀರಿಗಾಗಿ ನೆತ್ತರು ಬಗೆದವನು
ಬಾಯಾರಿಕೆ ತೀರಿಸಿದವನು
ನನ್ನಪ್ಪ
ಅನ್ನಕ್ಕಾಗಿ ಆಕಾಶಕೆ ಜಿಗಿದು
ಹಾರಿ ಉಲ್ಕೆಗಳೊಡನೆ
ಬಡಿದಾಡಿ ಹಸಿವು ನೀಗಿಸಿದವನು ನನ್ನಪ್ಪ
ಹುಟ್ಟಿನಿಂದ ಬೆಳೆದು ನಿಲ್ಲುವವರೆಗೆ
ಬೆವರಿಳಿಸಿದನು ನನ್ನಪ್ಪ,
ಹಬ್ಬಿದ ಬಳ್ಳಿಗೆ ಆಸರೆಯಾಗಿ
ನೆರಳಾಗಿ ನನ್ನ ಕಾಯ್ದವನು ನನ್ನಪ್ಪ
ಬೆಳಗುವುದ ನೋಡಿ ಸೂರ್ಯ ಚಂದ್ರರೆಂದು
ಕೂಗಿದ್ದನು ನನಗೆ
ಮಿನುಗುವುದ ನೋಡಿ ತಾರೆ ಎಂದಿದ್ದನು
ನನಗೆ
ಎಂದೂ ನಗದವನು ನನ್ನ ಮಗಳ ಕಂಡು ನಕ್ಕ
ಅವಳು ಅಳುವಾಗ ಅತ್ತ,
ಬಾಳೆಮರ ಬಿದ್ದಂತೆ ಅಪಘಾತದಿ ಬಿದ್ದು
ಎದ್ದು ನಾಯಿಪಾಡು ನೀಗಿ
ಮತ್ತೆ ಎದ್ದಿದ್ದ ಅಪ್ಪ,
ಮರಳಿ ನೀರಿನಂತೆ ಹರಿಯತೊಡಗಿದ್ದ,
ಆವಿಯಾಗಿ ಮಳೆಯಾಗಿ ಮುಗುಳ್ನಕ್ಕ..
ದೂರ ದಾರಿಯ ಸವೆಸಿ,
ಭಾವಧಾರೆಯ ಹರಿಸಿ
ನನ್ನ ನನ್ನಂತಾಗಿಸಿ,
ನನ್ನೊಳಗೆ ಅವಿತಿದ್ದಾನೆ
ಅರಿವಿನ ಮನೆಯ ದೀಪ ನನ್ನಪ್ಪ
-ನಳಿನ ಡಿ, ಚಿಕ್ಕಮಗಳೂರು
*****