ಬಳ್ಳಾರಿ, ಡಿ.24:ಹಿರಿಯ ರಂಗ ಕರ್ಮಿಗಳಾದ ವಿಜಯಪುರದ ಎಲ್‌ಬಿ ಶೇಖ್ ಮಾಸ್ತರ್ ಮತ್ತು ಬೆಂಗಳೂರಿನ ಗೌರಿದತ್ತು ಅವರಿಗೆ ಕ್ರಮವಾಗಿ 2020 ಮತ್ತು 2021 ನೇ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರ ಪ್ರಧಾನ ಮಾಡಲಾಗುವುದು ಎಂದು ರಂಗತೋರಣ ಸಂಸ್ಥೆಯ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೋಳದರಾಶಿ ರಾಮೇಶ ಟ್ರಸ್ಟ್, ನಗರದ ರಂಗತೋರಣ ಹಾಗೂ ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಸಹಯೋಗದಲ್ಲಿ ಡಿ. 25ರಂದು ಭಾನುವಾರ ಸಂಜೆ 6 ಗಂಟೆಗೆ ನಗರದ ಡಾ. ರಾಜಕುಮಾರ ರಸ್ತೆಯ ಡಾ.ಸುಭದ್ರಮ್ಮ ಮನ್ಸೂರು ಬಯಲು ರಂಗಮಂದಿರದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕಲಬುರಗಿಯ ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಹೇಳಿದರು.
ಸಂಡೂರು ಶ್ರೀ ಪ್ರಭುದೇವ ಸಂಸ್ಥಾನಮಠದ ಪ್ರಭುಸ್ವಾಮೀಜಿ ಸಾನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಅಪರ ಜಿಲ್ಲಾಧಿಕಾರಿ ಪಿ.ಎಸ್ ಮಂಜುನಾಥ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಆದವಾನಿಯ ಮದಿರೆ ಮರಿಸ್ವಾಮಿ, ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಅಧ್ಯಕ್ಷ ಜೋಳದರಾಶಿ ಪೊಂಪನಗೌಡ, ಹಿರಿಯ ರಂಗಕಲಾವಿದ ಕುಕನೂರಿನ ಬಾಬಣ್ಣ ಕಲ್ಮನಿ ಉಪಸ್ಥಿತರಿರುವರು.
ಭಕ್ತಿ-ರಂಗ ವಾದ್ಯ ವೈಭವ: ಹಾರ್ಮೋನಿಯಂ ಮಾಂತ್ರಿಕ ಮದಿರೆ ಮರಿಸ್ವಾಮಿ ಅವರು ಭಕ್ತಿ-ರಂಗ ವಾದ್ಯ ವೈಭವ ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದು ವಿವರಿಸಿದರು.
ಸುದ್ದಿ ಗೋಷ್ಠಿಯಲ್ಲಿ ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಅಧ್ಯಕ್ಷ ಜೋಳದರಾಶಿ ಪೊಂಪನಗೌಡ ಉಪಸ್ಥಿತರಿದ್ದರು.
*****