ಹ್ಯಾಪೀ ನ್ಯೂ ಈಯರ್
ಹೊಸ ವರುಷದ
ಹಿಂದಿನ ದಿನ
ಪ್ರತಿ ಬಾರಿ ನೆನಪಾಗುತ್ತಾರೆ
ಹಳೆಯ ಗೆಳೆಯ ಗೆಳತಿಯರು
ಹೈಸ್ಕೂಲಿನ ಗ್ರುಪ್ ಫೋಟೊದ ಹಿಂದಿನ
ಬಯಲಿನಲಿ ಮೂಡಿದ ಕಪ್ಪು ಬಿಳುಪಿನ
ಕಾಮನಬಿಲ್ಲು
ಕೆಲ ಮುಖಗಳ ಮೇಲೆ ಮೆತ್ತಿದ ಫಂಗಸ್ಸು
ಮತ್ತೆ ಬಿತ್ತಲಾಗದೇ ಆ ನಗೆ ನೋವು ?
ನವೀಕರಿಸಲಾಗದ ಬಣ್ಣಗಳು
ಟೂರಿಂಗ್ ಟಾಕೀಜಿನ ಗೇಟಿನಲಿ ಅರ್ಧ
ಹರಿದು ಕೊಟ್ಟ ಟಿಕೀಟು
ಜೋಪಾನವಾಗಿದೆ ಜೋಬಿನೊಳಗೆ
ಮುಂದಿನ
ಸಿನೇಮ ಬದಲಾಗುವವರೆಗೆ
ಮಾಜಿ ಪ್ರೇಯಸಿಯ
ಮುಖದ ಮೇಲೆ ಸ್ತಬ್ಧ ಗಡಿಯಾರ
ಅಲ್ಲಲ್ಲಿ ಸುಕ್ಕು ನರೆತ ಕೂದಲು
ಕೈ ಕೊಡುವ ನೆನಪು ಕನ್ನಡಕದ ಮರೆವು
ನಡಿಗೆಯೂ ತುಸು ನಿಧಾನ
ಯಾವ ನದಿ ಕದಿಯಿತೊ ಇವಳ ವೈಯ್ಯಾರ ?
ಕೆಂಪು ಅಂಚೆಯ ಡಬ್ಬ
ಈಗ ವಾರಕ್ಕೊಮ್ಮೆ ಮಾತ್ರ
ತೆರೆಯುತ್ತಾರೆ ಖಾಲೀ ಡಬ್ಬಿಯಲಿ
ಹಳೆಯ ಪತ್ರಗಳ ಎದೆಯ ಬಡಿತ
ಕೇಳಿ ಕಿವಿಯಿಟ್ಟು,ಗ್ರೀಟಿಂಗ್ ಕಾರ್ಡುಗಳ ಘಮ ಉಸಿರು ಇದೆ ಇನ್ನೂ
ಹಳೆಯ ಹತ್ತು ಪೈಸೆ ನಾಣ್ಯ
ಚಲಾವಣೆಯಲ್ಲಿಲ್ಲ ಈಗ
ಆದರೂ ಸದ್ದು ಮಾಡುತ್ತವೆ ಆಗಾಗ
ಹಳೆಯ ಟ್ರಂಕಿನಲಿ
ಏನೊ ತಡುಕಾಡುವಾಗ
ಚಾಲನೆಯಲ್ಲಿದ ಮುಖಗಳಿಗೆ
ಕನಸಿನಲ್ಲಿ ಬಂದು ಕಾಡುವ ನೆನಪುಗಳಿಗೆಲ್ಲ
ಯಾವ ಬೆಲೆ ಕಟ್ಟುವುದು ಇವಕೆಲ್ಲಾ ?
ಆಳ ಕಡಲಿನಲ್ಲೆಲ್ಲೋ
ಮುಳುಗಿದ ದೋಣಿ
ಹುಟ್ಟು ತೇಲಿ ಹೇಗೊ ಬಂದು ಹಣೆ ಚಚ್ಚಿ
ತುರ್ತಾಗಿ ಹೇಳಬೇಕಿದೆ ಏನೊ ತೀರದ ಬಂಡೆಗಳಿಗೆ
ಅಲೆಗಳ ಅಬ್ಬರದಲ್ಲಿ ಕೇಳಿಸುತಿಲ್ಲ ಏನೂ!
ಹನಿಗಣ್ಣಿನಲಿ ವಿದಾಯ
ಹೊಸ ವರ್ಷಕ್ಕಾದರೂ
ಮಾಯಲಿ ಎದೆಯ ಗಾಯ
-ಎಲ್ವಿ (ಡಾ. ಲಕ್ಷ್ಮಣ ವಿ ಎ) ಬೆಂಗಳೂರು
*****