ಬೆಂಗಳೂರು, ಡಿ.25; ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂಬ ನೂತನ ರಾಜಕೀಯ ಪಕ್ಷ ಘೋಷಣೆ ಮಾಡಿದರು.
ನಗರದ ತಮ್ಮ ನಿವಾಸದಲ್ಲಿ ಭಾನುವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ತಮ್ಮ ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದರು.
ಬರುವ ವಿಧಾನಸಭಾ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಪ್ರಕಟಿಸಿದ ಜನಾರ್ದನರೆಡ್ಡಿ 15 ದಿನಗಳ ಒಳಗೆ ಪಕ್ಷದ ಲಾಂಛನ, ಕಚೇರಿ ಕುರಿತ ಮಾಹಿತಿಯನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.
ರಾಜ್ಯದ ಅಭಿವೃದ್ಧಿ, ಪ್ರಗತಿಯೇ ನನ್ನ ಗುರಿಯಾಗಿದೆ ಉತ್ತಮ ಗುರಿ ಇಟ್ಕೊಂಡು ಜನರು ಮೆಚ್ಚುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತೇನೆ. ಕಷ್ಟದಲ್ಲಿ ಕುಟುಂಬ ನಿರ್ವಹಿಸಿದ
ತಮ್ಮ ಪತ್ನಿಯೂ ಸಾರ್ವಜನಿಕ ಬದುಕಿನಲ್ಲಿ ಗುರುತಿಸಿಕೊಳ್ಳುತ್ತಾರೆ ಎಂದರು.
ತಾವು ಕೆಲಸ ಮಾಡಿದ ಪಕ್ಷದಿಂದ ಸೂಕ್ತ ಸ್ಥಾನಮಾನ ಸಿಗದ ಹಿನ್ನಲೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿ ಮುಂದೆ ಹೆಜ್ಜೆ ಹಾಕುತ್ತೇನೆ ಎಂದು ತಿಳಿಸಿದರು.
ತಮ್ಮ ರಾಜಕೀಯದ ಹಿಂದಿನ ದಿನಗಳನ್ನು ನೆನಪಿಸಿಕೊಂಡ ಜನಾರ್ದನ ರೆಡ್ಡಿ, “ರಾಜ್ಯ ರಾಜಕಾರಣದಲ್ಲಿ ನನ್ನವರೇ ಅಂತ ನಾನು ಎಲ್ಲರನ್ನು ಮೆರೆಸಿ ನಾನೇ ಮೋಸ ಹೋದೆ ಆದರೆ
ತೀವ್ರ ಕಷ್ಟದಲ್ಲಿದ್ದಾಗ ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಅವರನ್ನು ಬಿಟ್ಟು ಬೇರೆ ಯಾವ ನಾಯಕರು ನನ್ನ ಮನೆಗೆ ಬಂದಿಲ್ಲ. ಅವರಿಬ್ಬರು ಮಾತ್ರ ನನಗೆ ಧೈರ್ಯ ತುಂಬಿದರು ಎಂದು ಎಂದು ಜನಾರ್ದನ ರೆಡ್ಡಿ ಸ್ಮರಿಸಿದರು.
ಆತ್ಮೀಯ ಸ್ನೇಹಿತ,ಸಚಿವ ಬಿ. ಶ್ರೀರಾಮುಲು ತಮ್ಮ ಸಹೋದರನಿದ್ದಂತೆ. ಅಧಿಕಾರದ ಅವಕಾಶಗಳು ಇದ್ದ ಸಂದರ್ಭದಲ್ಲಿ ಇವರಿಗೆ ಲಭಿಸಲು ಪಕ್ಷದ ನಾಯಕರಲ್ಲಿ ಒತ್ತಾಯಿಸುತ್ತಿದ್ದೆ. ಪ್ರಸ್ತುತ ತಮ್ಮ ಹೊಸ ಪಕ್ಷಕ್ಕೆ ಸೇರಲು ಹೇಳುವುದಿಲ್ಲ. ಎಲ್ಲಾ ಅವರ ವಿವೇಚನೆಗೆ ಬಿಡುತ್ತೇನೆ. ಒತ್ತಡ ಹೇರುವುದಿಲ್ಲ ಎಂದರು.
*****