ಅನುದಿನ‌ ಕವನ-೭೨೫, ಕವಿ:ಕುಮಾರ ರೈತ, ಬೆಂಗಳೂರು ಕವನದ ಶೀರ್ಷಿಕೆ:ಮುಕ್ತಿಗಾಗಿ ಕಾಯುವ ಅಟ್ಟ!

ಮುಕ್ತಿಗಾಗಿ ಕಾಯುವ ಅಟ್ಟ!

ಹಿರಿಯರು ಹೇಳುತ್ತಾರೆ
ಹಳೆಯ ಸಾಮಗ್ರಿಗಳನ್ನೆಲ್ಲ
ಅಟ್ಟಕ್ಕೆ ಹಾಕಿ

ಅವುಗಳ್ಯಾವುವೂ ಎಂದೂ
ಕೆಳಗೆ ಬರುವುದಿಲ್ಲ, ಮತ್ಯಾಕೆ
ಅಟ್ಟಕ್ಕೆ ಎಂದರೂ ಕೇಳುವುದಿಲ್ಲ

ಮೊದಲು ಜಿರಳೆ, ಹಲ್ಲಿ, ಇಲಿ
ಹೆಗ್ಗಣ ನಂತರ ಹಾವು
ಆದರೂ ಅಟ್ಟ ಸ್ವಚ್ಚವಾಗುವುದಿಲ್ಲ

ತೊಲೆಯಲ್ಲಿ ಬಳ್ಳಿ ನೇತಾಡುತ್ತಿದೆ
ಇಲಿಗೆ ಬಂದಿರಬೇಕು ಎಂದಾರೆಯೇ
ವಿನಃ ಅಟ್ಟದತ್ತ ನೋಡುವುದಿಲ್ಲ

ಮೊದಲು ಅಟ್ಟದ ಕೆಳಗಿರುವವರಿಗೆ
ದುರ್ವಾಸನೆ, ನಂತರ
ಮನೆಯಲ್ಲಿರುವವರಿಗೆಲ್ಲ ಗಬ್ಬುನಾತ

ಅಟ್ಟಕ್ಕಿನ್ನೂ ಮುಕ್ತಿ ದೊರಕಿಲ್ಲ
ದೊರಕುವ ಲಕ್ಷಣವೂ ಕಾಣಿಸುತ್ತಿಲ್ಲ
ನಾತದೊಂದಿಗೆ ಬಾಳ್ವೆ


– ಕುಮಾರ ರೈತ, ಬೆಂಗಳೂರು
*****