ಬಳ್ಳಾರಿ, ಡಿ.26: ಬಹುಮುಖಿ ವ್ಯಕ್ತಿತ್ವದ ಮೇರಿ ಸೆಲಿನಾ ಅವರು ತಮ್ಮ ನಲವತ್ತು ವರ್ಷದ ಶಿಕ್ಷಕ ವೃತ್ತಿಯಲ್ಲಿ ಮಾನವೀಯ ಮೌಲ್ಯಗಳಿಗೆ ಹೆಚ್ಚು ಒತ್ತು ನೀಡಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಕರ್ನಾಟಕ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ನಿಂಗಪ್ಪ ಅವರು ತಿಳಿಸಿದರು.
ಸ್ಥಳೀಯ ಗೌತಮ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ
ಶ್ರೀಮತಿ ಮೇರಿ ಸೆಲಿನಾ ಅವರು ಡಿ.31 ರಂದು ವಯೋ ನಿವೃತ್ತಿ ಹೊಂದುತ್ತಿರುವ ಹಿನ್ನಲೆಯಲ್ಲಿ ಎಸ್ ಆರ್ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ಸೋಮವಾರ ಮಧ್ಯಾಹ್ನ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಾನವೀಯತೆ, ಸಮಾಜ ಮುಖಿ ಕಾರ್ಯದ ಮೂಲಕ ಶಿಕ್ಷಕ ವೃತ್ತಿಗೆ ಮತ್ತಷ್ಟು ಘನತೆ ತಂದವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿವೃತ್ತಿ ಬಳಿಕವೂ ಶಿಕ್ಷಣ ಇಲಾಖೆ ಇವರ ಪ್ರತಿಭೆ, ಸೇವೆಯನ್ನು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಳವಣಿಗೆಯಲ್ಲಿ ಇವರ ಪಾತ್ರ ಮಹತ್ವವಾಗಿತ್ತು ಇವರು ಸಂಘದ ಶಕ್ತಿಯಾಗಿದ್ದರು ಎಂದರು.
ನಲವತ್ತು ವರ್ಷಗಳ ಕಾಲ ನಿರಂತರವಾಗಿ ಶಿಕ್ಷಕರಾಗಿ ಕಾರ್ಯನಿರ್ವಹಿಸುವ ಅವಕಾಶ ಕೆಲವರಿಗೆ ಮಾತ್ರ ಸಿಗುತ್ತದೆ. ಇಂತಹ ಸೇವೆ ಮೇರಿ ಸೆಲಿನಾ ಅವರಿಗೆ ಲಭಿಸಿರುವುದು, ಬೀಳ್ಕೊಡುಗೆ ಸಮಾರಂಭದಲ್ಲಿ ಎಂಬತ್ತೈದು-ತೊಂಬತ್ತು ವರ್ಷದ ತಾಯಿ ಕ್ಲಾರಾ , ಅತ್ತೆ ಅವರು ಪಾಲ್ಗೊಂಡಿರುವುದು ವಿಶೇಷ ಎಂದು ನಿಂಗಪ್ಪ ಬಣ್ಣಿಸಿದರು.
ಮುಖ್ಯ ಅತಿಥಿಯಾಗಿದ್ದ ಡಾ.ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ. ಮಂಜುನಾಥ ಮಾತನಾಡಿ ಮೇರಿ ಸೆಲಿನಾ ಅವರ ಸಮಾಜಮುಖಿ ಕಾರ್ಯಗಳು ಇತರರಿಗೆ ಮಾದರಿ. ಹಿಂದುಳಿದ ಕಡುಬಡತನದ ಮಕ್ಕಳನ್ನು ಗುರುತಿಸಿ ಅಗತ್ಯ ನೆರವನ್ನು ಕಲ್ಪಿಸಿ ವಿದ್ಯಾರ್ಥಿ ಮೆಚ್ಚಿನ ಶಿಕ್ಷಕಿಯಾಗಿದ್ದರು. ವಿದ್ಯಾರ್ಥಿಗಳ
ಶ್ರೇಯಸ್ಸಿಗೆ ಶ್ರಮಿಸುವ ಮೂಲಕ ಹಲವು ಸಂಘ ಸಂಸ್ಥೆಗಳ ಸನ್ಮಾನ, ಗೌರವಗಳಿಗೆ ಪಾತ್ರರಾಗಿದ್ದರು ಎಂದರು.
ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಕೆ. ಹನುಮಂತಪ್ಪ ಅವರು ಮಾತನಾಡಿ ಸೆಲಿನಾ ಅವರ ತಾಯಿಗುಣ, ಸೇವಾ ಮನೋಭಾವ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷ ವಹಿಸಿದ್ದ ಪಶ್ಚಿಮ ವಲಯದ ಬಿಇಓ ವೆಂಕಟೇಶ ರಾಮಚಂದ್ರಪ್ಪ ಉತ್ತಮ ಶಿಕ್ಷಕರು,
ಸೇವಾ ಮನೋಭಾವದ ಮೆರಿ ಸೆಲಿನಾ ಅವರಂತಹ ಶಿಕ್ಷಕರು ಇಲಾಖೆಯ ಆಸ್ತಿಯಾಗಿರುತ್ತಾರೆ. ವಯೋ ನಿವೃತ್ತಿಯಾದಾಗಲೂ ಬೀಳ್ಕೋಡುವುದು ಇಲಾಖೆಗೆ ಬೇಸರ ಸಂಗತಿ ಎಂದರು.
ಪಶ್ಚಿಮ ವಲಯದ ಬಿಆರ್ ಸಿ ಮನೋಹರ ಅವರು ಮಾತನಾಡಿ, ಆಂಗ್ಲ ಭಾಷೆಯ ಸಂಪನ್ಮೂಲ ವ್ಯಕ್ತಿಯಾಗಿರುವ ಮೇರಿ ಸೆಲಿನಾ ಅವರ ಸೇವೆ ಅನನ್ಯ. ಶಿಕ್ಷಕರಿಗೆ ತರಬೇತಿ ನೀಡುವ ಸಂದರ್ಭದಲ್ಲಿ ಮಾತ್ರ ಸಂಪನ್ಮೂಲ ವ್ಯಕ್ತಿಯಾಗಿದ್ದು ಬಳಿಕ ಸಾಮಾನ್ಯ ಶಿಕ್ಷಕಿಯಾಗಿ ಮಕ್ಕಳ ಕಲಿಕೆಗೆ ಶ್ರಮಿಸುತ್ತಿದ್ದರು ಒತ್ತು ನೀಡುತ್ತಿದ್ದರು ಎಂದು ಶ್ಲಾಘಿಸಿದರು. ಕುಟುಂಬ ಸದಸ್ಯರ ಪ್ರೋತ್ಸಾಹ ವಿದ್ದರೆ ವಿಶೇಷವಾದದ್ದನ್ನು ಸಾಧಿಸಬಹುದು ಎಂಬುದ್ದಕ್ಕೆ ಸೆಲಿನಾ ಅವರ ಸಮಾಜ ಮುಖಿ ಕಾರ್ಯಗಳೇ ಸಾಕ್ಷಿ ಎಂದರು.
ಸೆಲಿನಾ ಅವರ ಪತಿ ಪುಷ್ಪರಾಜ್ ಅವರು ಮಾತನಾಡಿ ಶಾಲೆಯಲ್ಲಿ ಮಾತ್ರವಲ್ಲ ಮನೆಯಲ್ಲೂ ಶ್ರಮಜೀವಿ ಎಂದರು. ಶಾಲೆಯಲ್ಲಿ ಒಳ್ಳೆಯ ಅಧ್ಯಾಪಕಿ.ಮನೆಯಲ್ಲೂ ಉತ್ತಮ ಗೃಹಿಣಿ ಎಂದು ಭಾವುಕರಾದರು. ಪುತ್ರಿ ಕ್ರಿಸ್ಮಾ ಅವರು ತಮ್ಮ ತಾಯಿಯ ಕಠಿಣ ಪರಿಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮೇರಿ ಸೆಲಿನಾ ಅವರು ಮಾತನಾಡಿ, ತಾವು ಸುದೀರ್ಘ ಸೇವೆ ಸಲ್ಲಿಸಲು ಇಲಾಖೆಯ ಅಧಿಕಾರಿಗಳು, ಸಹೋದ್ಯೋಗಿಗಳು, ಕುಟುಂಬ ಸದಸ್ಯರ ಸಹಕಾರ ಬೆಂಬಲ ಕಾರಣ. ನಿವೃತ್ತಿ ಬಳಿಕವೂ ಇಲಾಖೆ, ಮಕ್ಕಳ ಪ್ರಗತಿಗೆ ಶ್ರಮಿಸುವುದಾಗಿ ಹೇಳಿದರು.
ಸಿ ಆರ್ ಪಿ ಹನುಮೇಶ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಮೇರಿ ಸೆಲಿನಾ ಅವರು ಅತ್ಯಂತ ಕ್ರಿಯಾಶೀಲ ಶಿಕ್ಷಕಿ, ಡಿಸಿ(ಗೌತಮ) ನಗರದ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.
ಸಹೋದ್ಯೋಗಿ ಅಧ್ಯಾಪಕರಾದ ಕೊಳಗಲ್ಲು ಮಂಜುನಾಥ್, ತುಕಾರಾಂ, ಯರ್ರಂಗಳಿ ನಾಗರಾಜ್, ವಿದ್ಯಾರ್ಥಿನಿಯರಾದ ಶಾಂತ ಮತ್ತಿತರರು ಮಾತನಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಗುಂಡಪ್ಪ ನಾಗರಾಜ್, ಚನ್ನಬಸಪ್ಪ, ಶಿವಶಂಕರ್, ವೇದಾವತಿ, ಪಾರ್ವತಿ, ರಂಗನಾಥ್, ಹನುಮೇಶ್, ಸಿದ್ದಪ್ಪ, ಎಸ್.ಆರ್ ಶಾಲೆಯ ಮುಖ್ಯ ಗುರು ಬಾಬು, ಸೆಲಿನಾ ಅವರ
ತಾಯಿ ಕ್ಲಾರಾ ಚಿನ್ನಪ್ಪ ಪಿಳ್ಳೈ, ಕುಟುಂಬ ಸದಸ್ಯರಾದ ಜೊಸೆಫ್, ಲಿಮಾ, ಮೇರಿ ಎಲಿಜಬತ್, ರಚನಾ ಸೇರಿದಂತೆ ಹಲವು ಬಂಧು ಮಿತ್ರರು ಉಪಸ್ಥಿತರಿದ್ದರು.
ಅಧ್ಯಾಪಕಿ ರಬಿಯಾ ಸುಲ್ತಾನ ಸ್ವಾಗತಿಸಿದರು.
ವಿದ್ಯಾರ್ಥಿನಿ ಲಾವಣ್ಯ ಸಂಗಡಿಗರು ಪ್ರಾರ್ಥಿಸಿದರು.
ಉಮಾಮಹೇಶ್ವರಿ ನಿರೂಪಿಸಿದರು. ಶೋಭಾರಾಣಿ ವಂದಿಸಿದರು.
*****