ಇದ್ದೆ ಒಬ್ಬಳೇ…!
ಇದ್ದೆ ಒಬ್ಬಳೇ…
ಬಿಡುಬೀಸಾಗಿ ಚಂಗನೆ ಜಿಗಿಯುವ
ಆಶ್ರಮದ ಜಿಂಕೆಯ ಹಾಗೆ
ಚಿಗುರು ಎಲೆಗಳ ಪರಿಮಳದ ಹಾಗೆ
ಈ ಬೆಳಗು ನನ್ನ ಮುಷ್ಟಿಯೊಳಗೇ ಇವೆಯೆಂಬಂತೆ
ಇದ್ದೆ ಒಬ್ಬಳೇ…
ಕಾಡೊಳಗಿನ ಸೀತಾಳೆಯಂತೆ
ಬಣ್ಣವನರಳಿಸಿ ಹೂವ ಕಂಪಿಸಿ
ಯಾರೋ ದಂಡೆಯ ನೇಯ್ದಹಾಗೆ
ಮೌನದೊಳಗಿನ ಬೇರಿನಂತೆ
ಒಂದು ನೀಳ ಮುಸುಕನ್ನು ಸರಿಸಿದಂತೆ
ನೀ ಬಂದೆ ನಸುನಗುತಾ
ಜೊತೆಯೊಳು ಕುಶಲದೊಳು ಆಡಿಕೊಂಡಿರಲು
ದೇವಲೋಕದ ಗಂಧರ್ವನಂತೆ
ಹಸನಾಗಿ ಬೆರೆಯಲು ಸಿಕ್ಕ ಒಬ್ಬವನಂತೆ
ವಿರಹಣಿಯ ತಾಪವ ತಟ್ಟಿ ಉರಿದವನಂತೆ
ಒಳ ಮನೆಯ ಸಂಗೀತದಂತೆ
ಪಡಸಾಲೆಯ ಪಟ್ಟಂಗದಂತೆ
ಆಡಿದೆ… ಕೂಡಿದೆ…
ಇದ್ದೆ ಅಲುಗಾಡದ ಒಂದು ಗೊಂಬೆಯ ಹಾಗೆ
ಆಡಿಸುತ್ತಲೇ ಹೋದೆ
ಹೂವು ಬಾಡುವವರೆಗೆ
ಹೊಸತಲ್ಲವಿದು ಆಟ ನಿನಗೆ
ಹೊಸದೆಂಬಂತೆ ಆಡಿಸಿದೆ
ದಂಡೆಯ ನೇಯ್ದು ಮುಡಿಸಿದ ಸಂತನೇ
ನಿಜ ಹೇಳು ಕೊಳಲನಾದಕ್ಕೆ ಸೋತವರಾರು?
ಯಮುನೆಯ ತಟದಲ್ಲಿಟ್ಟ ಹೆಜ್ಜೆಗಳಾವುದದು?
ಕಳೆದಿರುಳ ಮಂದ ಬೆಳಕಲ್ಲಿ
ಪಿಸುಗುಟ್ಟಿದವರಾದರೂ ಯಾರಿರಬಹುದು?
ಮರುಳೆನಗೆ
ಹಾರುವ ದುಂಬಿಯ ಬಣ್ಣವ ಹಿಡಿಯಹೊರಟಿದ್ದು
ಕುಣಿವ ನಿನ್ನ ಹೆಜ್ಜೆಗಳಿಗೆ ಗೆಜ್ಜೆಯ ನಾದವಿಟ್ಟದ್ದು
ಚಾದರವ ಹೊದ್ದಂತಿದ್ದ
ಆಕಾಶಕ್ಕದೆಂತದ್ದೋ ಮೈಮರೆವು
ಒಡಲ ಹಚ್ಚನೆಯ ಹಸಿರ ಒಣಗಿಸುವಷ್ಟು
ಬಾಡಿಹೋಯಿತೊಂದು ಹೂವು
ತರುಲತೆಗಳಿಗೂ ಅಪ್ಪಿಕೊಳ್ಳಲಾಗದಷ್ಟು
ಬಣ್ಣವಗೆಡಿಸಿದ, ಗಂಧವ ಕೊಡವಿದ
ಓ ಗಾಳಿಯೇ
ಬಿಟ್ಟುಬಿಡು ಎನ್ನ
ಕತ್ತುಕೊಂಕಿಸಿ ಮೈಯ್ಯ ಚಾಚಿಸಿ
ಎಳೆಬಿಸಿಲಿಗೊಂದಷ್ಟು ಸಮಯ
ಮುಖವ ಒಡ್ಡುವವಳಿದ್ದೇನೆ
ಮಿಂದ ನೀರೆಲ್ಲ ತಲೆಯಿಂದ
ತೊಟ್ಟಿಕ್ಕುವ ಹಾಗೆ
ಬೆನ್ನ ತುಂಬಾ ಹೆರಳ ಹರವಿಕೊಳ್ಳುವವಳಿದ್ದೇನೆ
ನೇಯದಿರು ಮತ್ತೆ ನೋವ ದಂಡೆಯನ
– ಭಾರತಿ ಹೆಗಡೆ, ಬೆಂಗಳೂರು
*****