ರಂಗಭೂಮಿ ಜನತೆಯ ವಿಶ್ವವಿದ್ಯಾಲಯ -ಚೋರನೂರು ಟಿ.ಕೊಟ್ರಪ್ಪ ಅಭಿಮತ

ಬಳ್ಳಾರಿ, ಡಿ. 28: ರಂಗಭೂಮಿ ಜನತೆಯ ವಿಶ್ವವಿದ್ಯಾಲಯವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಉಪ ನಿರ್ದೇಶಕ ಚೋರನೂರು ಟಿ ಕೊಟ್ರಪ್ಪ ತಿಳಿಸಿದರು.
ತಾಲೂಕಿನ ಮೋಕಾ ಗ್ರಾಮದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಶ್ರೀ ಮಹಾದೇವ ತಾತ ಕಲಾ ಸಂಘ ಹಂದ್ಯಾಳು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಂಗಭೂಮಿ ಮತ್ತು ರಂಗಕಲಾವಿದರು ಕುರಿತ ವಿಚಾರ ಸಂಕಿರಣ,  ಗೀತಗಾಯನ ಹಾಗೂ ಹಾಸ್ಯ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಅವರು ಮಾತನಾಡಿದರು.
ನಾಟಕ, ನಟ, ಪ್ರೇಕ್ಷಕ, ಸಂಗೀತಗಾರರು ಮತ್ತು ನೇಪಥ್ಯದಲ್ಲಿ ಕಲಾಕಾರರನ್ನು ಒಳಗೊಂಡ ಮಹಾ ಸಂಸ್ಥೆ ರಂಗಭೂಮಿ. ಮಾನವನ ನೋವು, ನಲಿವು, ಅನುಭವಗಳ ಪ್ರತಿಬಿಂಬವಾಗಿದೆ ಎಂದು ಅಭಿಪ್ರಾಯ ಪಟ್ಟರು.
ನಾಟಕಗಳಲ್ಲಿ ಶೈಕ್ಷಣಿಕ, ಸಮಸ್ಯೆ, ಕುರುಡು ನಂಬಿಕೆ, ಅನಕ್ಷರತೆ, ಜಾತೀಯತೆ, ವರದಕ್ಷಿಣೆ, ಕುಡಿತದ ಪರಿಣಾಮ ಮುಂತಾದವುಗಳ ಮೇಲೆ ಬೆಳಕು ಚೆಲ್ಲಿ, ಅವುಗಳಿಂದ ಜನೆತೆಯನ್ನು ಮುಕ್ತಿಗೊಳಿಸುವುದೇ ರಂಗಭೂಮಿಯ ಧ್ಯೇಯವಾಗಿದೆ ಎಂದರು.


ಶ್ರೀ ಮಹಾದೇವತಾತಾ ಕಲಾಸಂಘವು ಕಳೆದ 18 ವರ್ಷಗಳಿಂದ ಸಾಮಾಜಿಕ, ಭಕ್ತಿಪ್ರಧಾನ, ಪೌರಾಣಿಕ ಹಾಗೂ ಬೀದಿ ನಾಟಕಗಳನ್ನು ಪ್ರದರ್ಶಿಸುವುದರ ಮೂಲಕ ರಂಗಭೂಮಿ ಉಳಿವಿಗಾಗಿ ತನ್ನದೇ ಆದ ರೀತಿಯಲ್ಲಿ ಶ್ರಮಿಸುತ್ತಿದೆ ಎಂದು ಶ್ಲಾಘಿಸಿದರು.
ರಂಗಭೂಮಿ ಹಲವಾರು ಲಲಿತ ಕಲೆಗಳ ಸಂಗಮವಾಗಿದ್ದು, ನಾಟಕವೇ ಅದರ ಜೀವಾಳವಾಗಿದೆ. ಮನಸ್ಸನ್ನು ರಂಜಿಸಿ, ಆತ್ಮವನ್ನು ಮೇಲೆತ್ತುವ ಸಾಧನ ಇದಾಗಿದೆ. ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಗಳನ್ನು ಮೇಲೈಳಿಸಿಕೊಂಡು ನಾಟಕವು ಜನಪ್ರಿಯ ದೃಶ್ಯ ಕಾವ್ಯವಾಗಿದೆ ಎಂದು ತಿಳಿಸಿದರು.


ಮೋಕಾ ಗ್ರಾ.ಪಂ ಅಧ್ಯಕ್ಷ ಡಿ. ರಾಮಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಮರುಳಸಿದ್ದಾಶ್ರಮದ ಶ್ರೀ ನಂಜುಂಡೇಶ್ವರ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರಕಾರಿ‌ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಇಸ್ಮಾಯಿಲ್ ಮಕಾಂದರ್, ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಹೊನ್ನೂರ ಅಲಿ, ಬಡ್ತಿ ಮುಖ್ಯ ಗುರುಗಳ ಸಂಘದ ಜಿಲ್ಲಾಧ್ಯಕ್ಷ ಮೆಹತಾಬ್, ಸಾಹಿತಿ ಕೆ. ಭುವನೇಶ್, ಪತ್ರಕರ್ತ ಸಿದ್ದರಾಮಪ್ಪ ಸಿರಿಗೇರಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಕಪ್ಪಗಲ್ಲು ಬಿ. ಚಂದ್ರಶೇಖರ ಆಚಾರ್, ನಿವೃತ್ತ ಮುಖ್ಯ ಶಿಕ್ಷಕ ಕೋರಿ ಸದಾಶಿವಪ್ಪ, ಮಂಜುನಾಥ ಗೋವಿಂದವಾಡ, ರಂಗಕಲಾವಿದ ಹೆಚ್. ಅಂಬರೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


ಹಾಸ್ಯ ಕಲಾವಿದ ಎ.ಎರ‍್ರಿಸ್ವಾಮಿ ಅವರು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಎರ‍್ರೆಮ್ಮ ಮತ್ತು ತಂಡದವರಿಂದ ಗೀತ ಗಾಯನ ಕಾರ್ಯಕ್ರಮ ನಡೆಯಿತು. ಅಲ್ಲದೆ, ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಇದೇ ವೇಳೆ ರಂಗ ಕಲಾವಿದ ಹೆಚ್. ಅಂಬರೀಶ್ ಮತ್ತು ಮಂಜುನಾಥ ಗೋವಿಂದವಾಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ. ಮಲ್ಲಿಕಾರ್ಜುನ ಹೆಚ್. ಅವರು ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಬಕಾಡೆ ಪಂಪಾಪತಿ ನಿರೂಪಿಸಿದರು. ಶ್ರೀ ಮಹಾದೇವತಾತ ಕಲಾ ಸಂಘದ ಅಧ್ಯಕ್ಷ ಹಂದ್ಯಾಳು ಪುರುಷೋತ್ತಮ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
*****