ಬಳ್ಳಾರಿ, ಡಿ.29: ರಾಷ್ಟ್ರಕವಿ ಕುವೆಂಪು ಅವರು ಜಾತೀಯತೆ, ಅರ್ಥಹೀನ ಆಚರಣೆಗಳನ್ನು ಕಟುವಾಗಿ ವಿರೋಧಿಸಿದ್ದರು ಎಂದು ನಿವೃತ್ತ ಉಪನ್ಯಾಸಕ ಎನ್ ಬಸವರಾಜ ಅವರು ಹೇಳಿದರು.
ನಗರದ ಆಲಾಪ್ ಸಂಗೀತ ಕಲಾ ಟ್ರಸ್ಟ್ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ
ವಿಶೇಷ ಘಟಕ ಯೋಜನೆಯಡಿ ರಾಷ್ಟ್ರಕವಿ ಕುವೆಂಪು ಜನ್ಮದಿನದ ಅಂಗವಾಗಿ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ
ವಿಚಾರ ಸಂಕಿರಣ, ಕೂಚಿಪುಡಿ ನೃತ್ಯ, ವಚನಗಾಯನ, ರಂಗಗೀತೆ, ನಾಟಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ನಾಡು, ನುಡಿ ಜತೆ ದೇಶವನ್ನು ಅಪಾರವಾಗಿ ಪ್ರೀತಿಸಿದ ಮಹಾನ್ ದೇಶಪ್ರೇಮಿ ಕುವೆಂಪು ಎಂದು ಕೊಂಡಾಡಿದರು.
ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳು. ನಾಯಕರು, ಸಾಹಿತಿ, ವಿಜ್ಞಾನಿ, ಶಿಕ್ಷಕರು ಆಗುವವರು ಎಂದು ತಿಳಿಸಿದ ಬಸವರಾಜ ಅವರು ರಸ ಋಷಿ, ಯುಗದ ಕವಿ ಕುವೆಂಪು ಅವರು ನಡೆದ ಮಾರ್ಗದಲ್ಲಿ ಪ್ರತಿಯೊಬ್ಬರೂ ನಡೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ.ಮಂಜುನಾಥ್ ಅವರು ಮಾತನಾಡಿ, ಕುವೆಂಪು ಅವರ ಜಾತ್ಯಾತೀತ ಮನೋಭಾವ, ಆಶಯವೇ ವಿಶ್ವಮಾನವ ಸಂದೇಶವಾಗಿದೆ ಎಂದು ತಿಳಿಸಿದರು.
ಹುಟ್ಟುವ ಪ್ರತಿ ಮಗುವೂ ವಿಶ್ವಮಾನವನೇ ಆಗಿರುತ್ತದೆ. ನಂತರ ಜಾತಿ ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ ಎಂದು ವಿಷಾಧಿಸಿದರು.
ಮನುಜ ಮತ, ವಿಶ್ವಪಥ ಸಾರಿದ ರಾಷ್ಟ್ರ ಕವಿ ಕುವೆಂಪು ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಹೇಳಿದರು.
ಮಕ್ಕಳ ಮಾನಸಿಕ ಬೆಳವಣಿಗೆಗೆ ನೃತ್ಯ ನಾಟಕ ಸಂಗೀತ ಅತ್ಯಗತ್ಯ. ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು.
ಕುವೆಂಪು ನಾಟಕಗಳ ವೈಶಿಷ್ಟ್ಯತೆ ಕುರಿತು ಉಪನ್ಯಾಸ ನೀಡಿದ ವಿ ಎಸ್ ಕೆ ವಿಶ್ವವಿದ್ಯಾಲಯದ ಪ್ರದರ್ಶನ ಕಲೆ,ನಾಟಕ ವಿಭಾಗದ ಉಪನ್ಯಾಸಕ ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ಅವರು, ಮನುಷ್ಯ ಮನುಷ್ಯನಿಗೆ ಸಹಾಯ ಮಾಡುವುದರಲ್ಲಿ ಶಿವನನ್ನು ಕಾಣಬೇಕು ಎಂದು ಕುವೆಂಪುರವರು ತಮ್ಮ ಜಲಗಾರ ನಾಟಕದ ಮೂಲಕ ಸಮಾಜಕ್ಕೆ ಸಂದೇಶ ನೀಡಿದ್ದಾರೆ. ಕುವೆಂಪುರವರ ಅನೇಕ ನಾಟಕಗಳು ಪ್ರಸ್ತುತ ಸಂದರ್ಭದಲ್ಲಿ ಸೂಕ್ತವಾಗಿ ಹೊಂದುತ್ತವೆ ಎಂದು ಅಭಿಪ್ರಾಯ ಪಟ್ಟರು.
ಕುವೆಂಪು ಅವರ ನಾಟಕಗಳು
ಸೃಜನಶೀಲಶೀಲತೆಯ ಅಭಿವ್ಯಕ್ತಿ ಜತೆ ಜನಸಾಮಾನ್ಯನ ಬದುಕು, ಸನ್ನಿವೇಶಗಳೊಂದಿಗೆ ಅನುಸಂಧಾನಗೊಳ್ಳುತ್ತವೆ ಎಂದು ವಿವರಿಸಿದರು.
ರಂಗಭೂಮಿ ಮತ್ತು ರಂಗ ಕಲಾವಿದರು ಕುರಿತು ಉಪನ್ಯಾಸ ನೀಡಿದ ಹಿರಿಯ ರಂಗ ಕಲಾವಿದ, ಪತ್ರಿಕಾ ಛಾಯಾಗ್ರಹಕ ಪುರುಷೋತ್ತಮ ಹಂದ್ಯಾಳು ಅವರು,
ರಂಗಭೂಮಿಗೆ ಅಖಂಡ ಬಳ್ಳಾರಿ ಜಿಲ್ಲೆಯ ಕೊಡುಗೆ ಅಪಾರ. ಬಳ್ಳಾರಿ ರಾಘವ, ಡಾ. ಜೋಳದರಾಶಿ ದೊಡ್ಡನಗೌಡ, ಶಿಡಗಿನಮೊಳ ಚಂದ್ರಯ್ಯಸ್ವಾಮಿ, ನಾಡೋಜ ಡಾ.ಸುಭದ್ರಮ್ಮ ಮನ್ಸೂರು ಅವರೊಂದಿಗೆ ನಾಡೋಜ ಬೆಳಗಲ್ಲು ವೀರಣ್ಣ, ಡಾ. ಕೆ. ನಾಗರತ್ನಮ್ಮ, ಕೂಡ್ಲಿಗಿ ಪದ್ಮ, ರಮೇಶಗೌಡ ಪಾಟೀಲ್, ಆದೋನಿ ವೀಣಾ ಸೇರಿದಂತೆ ಹಲವು ರಂಗ ನಟನಟಿಯರು ರಂಗಭೂಮಿಯನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ವಿದ್ಯಾರ್ಥಿಗಳು ಯಾವುದಾದರೂ ಒಂದು ಕಲೆಯನ್ನಾದರೂ ನಿಷ್ಠೆಯಿಂದ ಕಲಿಯಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವೀಣಾ ಆದೋನಿ, ರಮೇಶ್ ಗೌಡ ಪಾಟೀಲ್, ಸರಕಾರಿ ಆದರ್ಶ ವಿದ್ಯಾಲಯದ ಮುಖ್ಯ ಗುರು ಎಂ. ಕುಮಾರಸ್ವಾಮಿ, ರಂಗ ಕಲಾವಿದ ರಾಮಚಂದ್ರ ವಿ, ಕರ್ನಾಟಕ ಬಯಲಾಟ ಅಕಾಡೆಮಿ ಮಾಜಿ ಸದಸ್ಯ ಎಚ್ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.
ರಂಗ ಕಲಾವಿದರಾದ ನಾಗನಗೌಡ, ನೇತಿ ರಘುರಾಮ,ಬಿ ಎಂ ಬಸವರಾಜ, ಸುಬ್ಬಣ್ಣ, ವಿದ್ಯಾಲಯದ ಎಸ್ ಡಿ ಎಂ ಸಿ ಸದ್ಯಸರಾದ ತಿಮ್ಮಪ್ಪ, ದೊಡ್ಡ ಬಸಯ್ಯ, ರಂಗಕಲಾವಿದ ಅಮರೇಶ, ಕೆ ಕೃಷ್ಣ, ಸರ್ಕಾರಿ ಆದರ್ಶ ವಿದ್ಯಾಲಯ ಶಿಕ್ಷಕ ವೃಂದದವರು ಮತ್ತು ಕಲಾಭಿಮಾನಿಗಳು ಭಾಗವಹಿಸಿ ಯಶಸ್ವಿಗೊಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: ವಚನ ಗಾಯನವನ್ನು ಸಿದ್ದರಾಮಯ್ಯ ಮತ್ತು ತಂಡದವರು, ರಂಗಗೀತೆಗಳನ್ನು ಶ್ರೀಮತಿ ಓಂಕಾರಮ್ಮ ಕಪ್ಪಗಲ್ಲು ಮತ್ತು ತಂಡದವರು, ಕುಚುಪುಡಿ ನೃತ್ಯವನ್ನು ಅಭಿನಯ ಎಸ್.ಮತ್ತು ತಂಡದವರು, ಕೋಲಾಟ ನೃತ್ಯವನ್ನು ಆರ್.ಪೂಜಿತ ಮತ್ತು ಸಿಂಚನ ತಂಡದವರು, ಕೆ.ಹೊನ್ನೂರ ಸ್ವಾಮಿ ಮತ್ತು ತಂಡದವರು “ಸ್ವಾತಂತ್ರ ಹಳ್ಳಿ” ಎನ್ನುವ ಮಕ್ಕಳ ನಾಟಕವನ್ನು ಪ್ರದರ್ಶಿಸಿದರು.
ನಾಟಕ ವಿಭಾಗದ ಉಪನ್ಯಾಸಕ ವಿಷ್ಣು ಹಡಪದ ಅವರು ಸ್ವಾಗತಿಸಿದರು. ವಿದ್ಯಾಲಯದ ಸಿಂಚನ ಮತ್ತು ತಂಡ ಪ್ರಾರ್ಥಿಸಿದರು. ಸರ್ಕಾರಿ ಆದರ್ಶ ವಿದ್ಯಾಲಯದ ಕನ್ನಡ ಶಿಕ್ಷಕಿ ಶ್ರೀಮತಿ ವೀಣಾ ನಿರೂಪಿಸಿದರು.ಟ್ರಸ್ಟ್ ಅಧ್ಯಕ್ಷ ರಮಣಪ್ಪ ಭಜಂತ್ರಿ ವಂದಿಸಿದರು.
*****