ಅಭಿನಯ ಕಲಾಕೇಂದ್ರ ಆಯೋಜನೆ: ಸಿಡಿಗಿನಮೊಳ ಗ್ರಾಮದಲ್ಲಿ `ಗ್ರಾಮೀಣ ಕಲಾ ಸಂಗಮ’ ಯಶಸ್ವಿ

 

ಬಳ್ಳಾರಿ, ಡಿ.30:ನಗರದ ಅಭಿನಯ ಕಲಾಕೇಂದ್ರ ಮತ್ತು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಸಾಮಾನ್ಯ ಯೋಜನೆಯಡಿ ಗುರುವಾರ ತಾಲೂಕಿನ ಸಿಡಿಗಿನಮೊಳ ಗ್ರಾಮದಲ್ಲಿ ಜರುಗಿದ `ಗ್ರಾಮೀಣ ಕಲಾ ಸಂಗಮ’ ಕಾರ್ಯಕ್ರಮ ಯಶಸ್ವಿಯಾಗಿ ನಡೆದು ಗ್ರಾಮೀಣ ಪ್ರೇಕ್ಷಕರ ಮನಸೂರೆಗೊಂಡಿತು.
ಜಾನಪದ ತಮಟೆ ವಾದ್ಯವನ್ನು ನುಡಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಕಲಾವಿದ ಮಹೇಶ್ವರಯ್ಯ ಸ್ವಾಮಿ ಅವರು ಮಾತನಾಡಿ, ಕಳೆದ ಎರಡು ವರ್ಷಗಳಿಂದ ನಾಟಕ ಬಯಲಾಟಗಳಿಲ್ಲದೇ ಸೊರಗಿದ ಹಳ್ಳಿಗಳಲ್ಲಿ ಇಂಥಾ ಕಾರ್ಯಕ್ರಮಗಳು ಜನತೆಯಲ್ಲಿ ಚೈತನ್ಯ ಮೂಡಿಸುತ್ತವೆ. ಸಂಸ್ಕೃತಿ ಇಲಾಖೆಯ ಕಾರ್ಯಕ್ರಮವನ್ನು ನಗರ ಪ್ರದೇಶದಲ್ಲಿ ಏರ್ಪಡಿಸುವುದು ಸುಲಭ, ಸಿದ್ಧವಾದ ರಂಗಮಂದಿರ ಇರುತ್ತವೆ. ಆದರೆ ಇಂಥಾ ದೂರದ ಗ್ರಾಮಗಳ ಮೇಲಿನ ಪ್ರೀತಿಯಿಂದ ಅಭಿನಯ ಕಲಾಕೇಂದ್ರದ ಅಧ್ಯಕ್ಷರಾದ ಕೆ. ಜಗದೀಶ್ ಅವರು ಶ್ರಮವಹಿಸಿ ಇಂಥಾ ಕಾರ್ಯಕ್ರಮವನ್ನು ನಮ್ಮ ಹಳ್ಳಿಗೆ ತಂದಿರುವುದಕ್ಕೆ ಪ್ರಶಂಸಿಸಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತಿ ಅಧ್ಯಕ್ಷ ಪಿ. ರುದ್ರಯ್ಯ ಅವರು ಮಾತನಾಡಿ, ಗ್ರಾಮಸ್ಥರ ಬೇಡಿಕೆಯಂತೆ ಮುಂದಿನ ವಾರ ಸಿಡಿಗಿನಮೊಳ ಗ್ರಾಮದ ಬನಶಂಕರಿ ಜಾತ್ರೆಗೆ ನಾಟಕ ಪ್ರದರ್ಶನ ನೀಡಬೇಕೆಂದು ಆಹ್ವಾನಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ರಂಗ ನಿರ್ದೇಶಕ ಕೆ. ಜಗದೀಶ್, ಸಿಡಿಗಿನಮೊಳ ಗ್ರಾಮ ಕಲಾವಿದರ ಶಕ್ತಿಸ್ಥಲ ಎಂದರು. ಖ್ಯಾತ ನಾಟಕಕಾರ, ನಿರ್ದೇಶಕ ವೈ.ಎಂ. ಚಂದ್ರಯ್ಯ, ಹಾರ್ಮೋನಿಯಂ ಮಾಸ್ಟರ್ ವೀರಭದ್ರಪ್ಪ ಹಾಗೂ ಅಭಿಮನ್ಯು ಕಾಳಗ ಬಯಲಾಟ ಬರೆದ ಬಳೆ ಸಿದ್ದಪ್ಪರ ಕಲಾಸೇವೆಯನ್ನು ಸ್ಮರಿಸಿದರು. ಬಯಲಾಟದ ಮಾಸ್ಟರ್ ಹೆಚ್. ತಿಪ್ಪೇಸ್ವಾಮಿಯವರು ಗ್ರಾಮದ ಕಲಾಪ್ರೇಮವನ್ನು ಶ್ಲಾಘಿಸಿದರು.
ವೇದಿಕೆಯಲ್ಲಿ ಜೆಸ್ಕಾಂ ಜೆ.ಇ. ಅಶೋಕ್, ಗ್ರಾಮದ ಹಿರಿಯರಾದ ಚನ್ನಬಸವನಗೌಡ, ಗ್ರಾಮಪಂಚಾಯತಿ ಸದಸ್ಯರು ಹಾಗೂ ಗ್ರಾಮದ ಮುಖಂಡರು ಇದ್ದರು.

ಶರಣ ಬಸವರಾಜ ತಂಡದ ವಚನ ಗಾಯನ, ಇ. ಮಧುಸೂದನ ತಂಡದ ತೊಗಲುಗೊಂಬೆ ಪ್ರದರ್ಶನ ಮತ್ತು ದಕ್ಷಿಣ ಮೂರ್ತಿ ತಂಡದ ನಾಟಕದ ದೃಶ್ಯಗಳನ್ನು ಗ್ರಾಮಸ್ಥರು ಮೆಚ್ಚಿ ಪ್ರೋತ್ಸಾಹಿಸಿದರು. ಮತ್ತೊಮ್ಮೆ ತಮ್ಮ ಗ್ರಾಮದಲ್ಲಿ ಇಂಥಾ ಕಾರ್ಯಕ್ರಮಗಳನ್ನು ಏರ್ಪಡಿಸಬೇಕೆಂದು ಒತ್ತಾಯಿಸಿದರು.
ಲೇಖಕ ಕೆ. ಜಗದೀಶ್ ಸ್ವಾಗತಿಸಿದರು.
ನಟ ಆದರ್ಶ ನಿರೂಪಿಸಿದರು. ವಸಂತಕುಮಾರ ವಂದಿಸಿದರು.
*****