ಅನುದಿನ ಕವನ-೭೨೯, ಕವಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ:ತೊಳಲಾಟ

ತೊಳಲಾಟ

ಹಸೆಮಣಿಯನೇರಿ
ಸಪ್ತಪದಿಯ ತುಳಿದು
ಪತಿಯ ಮನೆಯ ಹೊಸಲಿನಲ್ಲಿ
ಕಣ್ತುಂಬ ಕನಸುಗಳ ಹೊದ್ದು
ಬಲಗಾಲಿನಿಂದ ಸೇರನೊದ್ದು
ಒಳಬರುವ ಹೆಣ್ಣಿಗೆ
ಮನಪೂರ ಹೊಂದಾಣಿಕೆಯ ತೊಳಲಾಟ !

ಬಾಲ್ಯದ ಗೆಳತಿಯರೊಂದಿಗೆ
ನಿತ್ಯವೂ ಜೊತೆಗೂಡಿ
ಕುಣಿದು ಕುಪ್ಪಳಿಸಿ
ಮನದ ತುಂಬ ನಕ್ಕು ನಗಿಸಿ
ಅರೆಕ್ಷಣವೂ ಅಗಲಿರದಂತೆ ಇರಲು
ಗಕ್ಕನೆ ಬಿಟ್ಟು ಬರುವ ಕ್ಷಣ
ಮೌನ ಸಾಂಗತ್ಯದ ತೊಳಲಾಟ !

ಅಣ್ಣ – ತಂಗಿಯರೊಂದಿಗೆ
ಚೆಲ್ಲಾಟ ಆಡುತ್ತಾ, ಜಗಳ ಕಾಯುತ್ತಾ
ಕ್ಷಣ ಪ್ರೀತಿ, ಕ್ಷಣ ಸಿಟ್ಟಿನೊಂದಿಗೆ
ಅಂಟಿಕೊಂಡು ಬೆಳೆದು
ಬಂಧನವ ಬಿಟ್ಟು ಬರುವ
ಬಂಧುತ್ವದ ತೊಳಲಾಟ !

ಹೆತ್ತವರ ಪ್ರೀತಿಯ ಪಡೆದು
ಅವರು ತೋರಿದ ದಾರಿಯಲ್ಲಿ ನಡೆದು
ಮನೆ – ಮನ ಬೆಳಗುವ ಮಗಳಾಗು
ಎಂದು ಹರಸಿ, ಕಣ್ಣೀರ ಒರೆಸಿ
ಬಿಗಿದಪ್ಪಿ ಕಳುಹಿಸುವಾಗ
ಕರುಳ ಬಿಕ್ಕಳಿಕೆಯ ತೊಳಲಾಟ !

-ಶೋಭಾ ಮಲ್ಕಿ ಒಡೆಯರ್🖊️
ಹೂವಿನ ಹಡಗಲಿ