ಗೆ ,
ಮಾನ್ಯ ಅಧ್ಯಕ್ಷರು
ಕನ್ನಡ ಸಾಹಿತ್ಯ ಪರಿಷತ್
ಪಂಪ ಮಹಾ ಕವಿ ರಸ್ತೆ
ಚಾಮರಾಜ ಪೇಟೆ
ಬೆಂಗಳೂರು
ಮಾನ್ಯರೆ ,
ಹಾವೇರಿಯಲ್ಲಿ ಆಯೋಜಿಸಿರುವ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಿನಾಂಕ 7 .12 .2022 ರಂದು ನಡೆಯಲಿರುವ ಕವಿ ಗೋಷ್ಠಿಗೆ ತಾವು ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುತ್ತೀರಿ.ಅದಕ್ಕಾಗಿ ನಾನು ತಮಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಈ ಸಂಬಂಧ ನನಗೆ ಡಿಜಿಟಲ್ ಮಾಧ್ಯಮದ ಮೂಲಕ ಆಹ್ವಾನ ಪತ್ರಿಕೆಯೂ ಸಹ ತಲುಪಿದೆ. ಆಹ್ವಾನ ಪತ್ರಿಕೆಯನ್ನು ಗಮನಿಸಿದಾಗ ಅದರಲ್ಲಿನ ವಿವಿಧ ಗೋಷ್ಠಿಗಳಲ್ಲಿ , ವೇದಿಕೆಗಳಲ್ಲಿ ಕನ್ನಡದ ಸಮಕಾಲೀನ ಮಹತ್ವದ ಲೇಖಕ ಲೇಖಕಿಯರ ಹೆಸರುಗಳೇ ಕಂಡು ಬರುತ್ತಿಲ್ಲ. ಅಲ್ಲದೇ ಕನ್ನಡಿಗರೇ ಆಗಿರುವ ಮುಸ್ಲಿಂ ಸಮುದಾಯದ ಲೇಖಕರ ಪ್ರಾತಿನಿಧ್ಯವೇ ಇರುವುದಿಲ್ಲ. ನೂರಾರು ಸಂಖ್ಯೆಯಲ್ಲಿರುವ ಬ್ಯಾರಿ ಸಮುದಾಯದ ಮಹತ್ವದ ಲೇಖಕರನ್ನು ಸಮ್ಮೇಳನದಲ್ಲಿ ಸಂಯೋಜಿಸಿ ಕೊಂಡಿರುವುದಿಲ್ಲ. ಈ ಬಗ್ಗೆ ಕನ್ನಡದ ಹಲವಾರು ಲೇಖಕರು ಮಾಧ್ಯಮದಲ್ಲಿ ತಮ್ಮ ಪ್ರತಿಕ್ರಿಯೆಯನ್ನೂ ಸಹ ವ್ಯಕ್ತ ಪಡಿಸಿರುತ್ತಾರೆ. ಇದಕ್ಕೆ ಪರಿಷತ್ತಿನ ವತಿಯಿಂದ ಯಾವುದೇ ರೀತಿಯ ಸಮಜಾಯಿಷಿ ಹೇಳಿಕೆಗಳೂ ಕೂಡಾ ಬಂದಿರುವುದಿಲ್ಲ. ಈ ಎಲ್ಲ ಘಟನೆಗಳನ್ನು ನೋಡಿದರೆ ಬ್ಯಾರಿ ಸಮುದಾಯದ ಲೇಖಕರನ್ನು ಸಮ್ಮೇಳನದಿಂದ ಬೇಕೆಂದೇ ದೂರವಿಟ್ಟಿರುವಂತೆ ಮೇಲು ನೋಟಕ್ಕೆ ಕಂಡು ಬರುತ್ತಿದೆ.
ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ರೀತಿಯ ತಾರತಮ್ಯ ಇರಬಾರದು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿರುತ್ತದೆ. ಇಂಥ ತಾರತಮ್ಯದಿಂದ ಕೂಡಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಕವಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡುವುದಕ್ಕೆ ನನ್ನ ಮನಸ್ಸು ಒಪ್ಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಾನು ಹಾವೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುತ್ತಿಲ್ಲ ಎನ್ನುವ ವಿಷಯವನ್ನು ವಿನಮ್ರತೆಯಿಂದ ನಿಮ್ಮಲ್ಲಿ ನಿವೇದಿಸಿ ಕೊಳ್ಳುತ್ತಿದ್ದೇನೆ.
ಹಾವೇರಿಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿ
ಗೋಷ್ಠಿಯಲ್ಲಿ ಭಾಗವಹಿಸಿ ಅಧ್ಯಕ್ಷತೆ ವಹಿಸಲು ಕನ್ನಡ ಸಾಹಿತ್ಯ ಪರಿಷತ್ ಗೆ ನನ್ನ ಸಮ್ಮತಿಯನ್ನು ನೀಡಿದ್ದಾಗ ಮುಂದೆ ಈ ರೀತಿಯ ಪರಿಸ್ಥಿತಿ ಉದ್ಭವಿಸಬಹುದು ಎನ್ನುವ ಕಲ್ಪನೆ ನನಗೆ ಇರಲಿಲ್ಲ. ಆದರೆ ದುರದೃಷ್ಟವಶಾತ್ ಈ ರೀತಿಯ ಬೆಳವಣಿಗೆಗಳು ಘಟಿಸಿ ನನ್ನ ಮನಸ್ಸಿಗೆ ಕಸಿವಿಸಿ ಉಂಟಾಗಿದೆ. ಕವಿ ಗೋಷ್ಠಿಯ ಅಧ್ಯಕ್ಷತೆಗೆ ಒಪ್ಪಿಗೆ ನೀಡಿ ಈಗ ಅಸಮ್ಮತಿ ಸೂಚಿಸುತ್ತಿರುವುದರಿಂದ ನಿಮಗೆ ಆಗಬಹುದಾದ ಮುಜುಗುರಕ್ಕೆ ವಿಷಾದ ವ್ಯಕ್ತ ಪಡಿಸುತ್ತೇನೆ. ಇನ್ನು ಮುಂದೆ ಇಂಥ ಘಟನೆಗಳು ಪುನರಾವರ್ತನೆ ಆಗದಂತೆ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ತಾವು ಗಮನ ಹರಿಸ ಬೇಕೆಂದು ವಿನಂತಿಸಿ ಕೊಳ್ಳುತ್ತೇನೆ .
ಇನ್ನು ಮುಂದೆ ಇಂಥ ಮುಜುಗುರದ ಸನ್ನಿವೇಶಗಳು ಸಮ್ಮೇಳನದಲ್ಲಿ ಉಂಟಾಗದಿರಲಿ ಎನ್ನುವ ಆಶಯದೊಂದಿಗೆ ಹಾವೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಯಶ ಕೋರುತ್ತೇನೆ .
ವಂದನೆಗಳೊಂದಿಗೆ
ತಮ್ಮ ವಿಶ್ವಾಸಿ
-ಎಚ್ ಆರ್ ಸುಜಾತ, ಬೆಂಗಳೂರು
*****