ಬಳ್ಳಾರಿ ವಿಮ್ಸ್ 400 ಹಾಸಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಅಡಿಗಲ್ಲು:  ರಾಜ್ಯದಲ್ಲಿ ಇದು ಅತೀ ದೊಡ್ಡ ಆಸ್ಪತ್ರೆ ಆಗಲಿದೆ -ಸಿಎಂ ಬೊಮ್ಮಾಯಿ

ಬಳ್ಳಾರಿ,ಜ.4:ನಗರದ ವಿಮ್ಸ್ ಆವಣರದಲ್ಲಿ ಜಿಂದಾಲ್ ನೆರವಿನೊಂದಿಗೆ ನಿರ್ಮಿಸುತ್ತಿರುವ 400 ಹಾಸಿಗೆಯುಳ್ಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ರಾಜ್ಯದಲ್ಲಿಯೇ ಅತಿ ದೊಡ್ಡ ಆಸ್ಪತ್ರೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು.
ಅವರು ಬುಧವಾರ ಜಿಲ್ಲಾ ಆಡಳಿತ ಮತ್ತು ಜಿಂದಾಲ್ ಇವರ ಸಂಯುಕ್ತಾಶ್ರಯದಲ್ಲಿ ನಗರದ ವಿಮ್ಸ್ ಆವರಣದಲ್ಲಿ 109 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲುದ್ದೇಶಿಸಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.


ಆಸ್ಪತ್ರೆ ನಿರ್ಮಾಣದಿಂದ ಸಮಗ್ರ ಬಳ್ಳಾರಿ ಜಿಲ್ಲೆಯಲ್ಲಿನ ತಾಯಿ ಮತ್ತು ಮಕ್ಕಳ ಆರೋಗ್ಯ ಕಾಪಾಡಲು ಸಹಕಾರಿಯಾಗಲಿದೆ ಎಂದರು.
ಪೌಷ್ಟಿಕ ಆಹಾರ: ಎಲ್ಲಾ ತಾಯಿ ಮತ್ತು ಮಕ್ಕಳಿಗೆ ಪೌಷ್ಟಿಕತೆಯುಕ್ತ ಆಹಾರ ಸಿಗಬೇಕು, ಅಪೌಷ್ಟಿಕತೆಯಿಂದ ತಾಯಿ ಮತ್ತು ಮಗುವಿನ ಬೆಳವಣಿಗೆಯಲ್ಲಿ ಕುಂಠಿತವಾಗುತ್ತದೆ. ಈ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪೌಷ್ಟಿಕತೆ ಸುಧಾರಣೆಗೆ ಪೌಷ್ಟಿಕತೆಯುಕ್ತ ಆಹಾರ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.


ಸಿಎಸ್‍ಆರ್ ನಿಧಿ ಹೆಚ್ಚು ಬಳಸಿ: ಈ ಭಾಗದ ಜನರ ಆರೋಗ್ಯ, ಶಿಕ್ಷಣ ಮತ್ತು ಜನರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಜಿಂದಾಲ್ ಕಾರ್ಯ ಉತ್ತಮವಾಗಿದೆ. ಜೊತೆಗೆ ಸಿಎಸ್‍ಆರ್ ನಿಧಿಯಡಿ ಇಲ್ಲಿನ ಜನರಿಗೆ ದೊಡ್ಡ ಮಟ್ಟದ ಕೊಡುಗೆಯನ್ನು ತಮ್ಮಿಂದ ನಿರೀಕ್ಷಿಸಲಾಗುತ್ತಿದೆ ಎಂದು ಸ್ಥಳದಲ್ಲಿದ್ದ ಜಿಂದಾಲ್ ಸಂಸ್ಥೆಯ ಮುಖ್ಯಸ್ಥರಿಗೆ ತಿಳಿಸಿದರು.
ನಗರದ ಕ್ರೀಡಾಂಗಣದಲ್ಲಿ ರೂ.6 ಕೋಟಿ ವೆಚ್ಚದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಅಥ್ಲೆಟಿಕ್ ಸಿಂಥೆಟಿಕ್ ಟ್ರ್ಯಾಕ್ ಮುಖ್ಯಮಂತ್ರಿ ಅವರು ಉದ್ಘಾಟನೆ ಮಾಡಿದರು.
ಜಿಲ್ಲಾ ಆಸ್ಪತ್ರೆಯಲ್ಲಿ ರೂ.21 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಮತ್ತು  ರೂ.4.90 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ವೈದ್ಯಕೀಯ ದಾಖಲೆಗಳ ವಿಭಾಗ ಹಾಗೂ ರೇಡಿಯೋಲಾಜಿ ವಿಭಾಗಗಳ ನೂತನ ಕಟ್ಟಡವನ್ನು ಉದ್ಘಾಟನೆ ಮಾಡಿದರು.


ನೂತನ ಜಿಲ್ಲಾಡಳಿತ ಭವನ ಲೋಕಾರ್ಪಣೆ; ಬಳ್ಳಾರಿ ನಗರದಲ್ಲಿ ಪ್ರವಾಸಿ ಮಂದಿರದ ಬಳಿ ರೂ. 25 ಕೋಟಿ ವೆಚ್ಚದಲ್ಲಿ ನೂತನವಾಗಿ ಜಿಲ್ಲಾಡಳಿತ ಭವನ ನಿರ್ಮಾಣ ಮಾಡಲಾಗಿದ್ದು ಮಾನ್ಯ ಮುಖ್ಯಮಂತ್ರಿ ಅವರು ಉದ್ಘಾಟನೆ ನೆರವೆರಿಸಿದರು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು, ಸಂಸದರಾದ ವೈ.ದೇವೇಂದ್ರಪ್ಪ, ಶಾಸಕರಾದ ಬಿ.ನಾಗೇಂದ್ರ, ಸೋಮಲಿಂಗಪ್ಪ, ಜೆ.ಎನ್.ಗಣೇಶ್, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ. ರಾಜ್ಯ ಜವಳಿ ಮತ್ತು ಮೂಲಭೂತ ಸೌಕರ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಗುತ್ತಿಗನೂರು ವಿರುಪಾಕ್ಷಗೌಡ, ಮೇಯರ್ ಎಂ.ರಾಜೇಶ್ವರಿ, ಬುಡಾ ಅಧ್ಯಕ್ಷ ಸರ್ವಶೆಟ್ಟಿ ಮಾರುತಿ ಪ್ರಸಾದ್, ಪೊಲೀಸ್ ಮಹಾನಿರೀಕ್ಷಕರಾದ ಲೋಕೇಶ್‍ಕುಮಾರ್, ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಲಿಂಗಮೂರ್ತಿ, ಜಿಲ್ಲಾ ರಕ್ಷಣಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಮಂಜುನಾಥ್ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.
*****