ಅಪ್ಪ
ಕೇಳಿರುವುದನೆಲ್ಲ ತಂದು ಕೊಟ್ಟು ಗತ್ತಿನಿಂದ ಗೊತ್ತಿಲ್ಲದವರಂತೆ ನಟಿಸಿದವನು ಅಪ್ಪ||
ಮಾತು ಕಠೋರವೆನಿಸಿದರೂ ಮನಸ್ಸು ಮಲ್ಲಿಗೆಯಷ್ಟು ಮೃದುವಾಗಿದ್ದವನು ಅಪ್ಪ||
ಗೋಗರೆದು ಬಿನ್ನಯಿಸಿಕೊಂಡರೂ ಹಸಿವು ಅರ್ಥೈಸಿಕೊಳ್ಳದವರ ಎದುರಲ್ಲಿ|
ಮುಖ ನೋಡಿಯೇ ಬೇಕು ಬೇಡಗಳನ್ನು ಅಕ್ಕರೆಯಿಂದ ಪೂರೈಸಿದವನು ಅಪ್ಪ||
ತೊಟ್ಟಿರುವ ಉಡುಗೆಯನ್ನು ಕಂಡು ಸಲಾಂ ಹೊಡೆಯುವವರ ಮಧ್ಯದಲ್ಲಿ|
ಬೆನ್ನು ಹರಿದ ತನ್ನಂಗಿಯ ಕಡೆಗನಿಸಿ ಹೊಸ ಬಟ್ಟೆ ಕೊಡಿಸಿದವನು ಅಪ್ಪ||
ಬದುಕಿನಲ್ಲಿ ಬಂದು ಹೋಗುವ ಎಡರು ತೊಡರುಗಳಿಗೆ ಭಯ ಪಟ್ಟವರೇ ಹೆಚ್ಚು|
ಕಷ್ಟಗಳ ಕುಂಡದಲಿ ತಾ ಬೆಂದು ಬಸವಳಿದರೂ ಎಂದೂ ಎದೆ ಗುಂದದವನು ಅಪ್ಪ||
ಸೋತು ಹೋದಾಗ ಹೂತು ಹಾಕುವ ಜಗ ಜಯಿಸಿದರೆ ಮಾತ್ರ ಜೈ ಎನ್ನುವುದು|
ಹಗಲೂ ರಾತ್ರಿ ಹೆಗಲಿಗೆ ಹೆಗಲಾಗಿ ಈ ಲೋಕವನ್ನು ಪರಿಚಯಿಸಿದವನು ಅಪ್ಪ||
ಏರುವ ಮೆಟ್ಟಿಲುಗಳು ಗಟ್ಟಿಯಾಗಿದ್ದರೆ ಬೆಟ್ಟವೇ ಪಾದದಡಿ ನಿಲ್ಲುವುದು|
‘ಗಟ್ಟಿಸುತ’ ಇಟ್ಟ ಗುರಿ ಮುಟ್ಟಲು ತನಗಿಂತ ಹೆಚ್ಚು ಕನಸು ಕಟ್ಟಿ ಕೊಟ್ಟವನು ಅಪ್ಪ||
-ಎಂ.ಡಿ.ಬಾವಾಖಾನ ಸುತಗಟ್ಟಿ, ಬೆಳವಡಿ
*****