ಪಕ್ಷದಲ್ಲಿ ಈಗಲೂ ನಾನು ಪವರ್ ಫುಲ್ -ಡಾ.ಜಿ ಪರಮೇಶ್ವರ್

ಬಳ್ಳಾರಿ, ಡಿ.5:ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪಕ್ಷ ಜ.8 ರಂದು ಆಯೋಜಿಸಿರುವ ಎಸ್ಸಿ, ಎಸ್ಟಿ ಸಮಾವೇಶದಲ್ಲಿ ಅಂದಾಜು ಐದು ಲಕ್ಷ ಜನರು ಸೇರಲಿದ್ದಾರೆ ಎಂದು ಮಾಜಿ‌ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು.
ಅವರು ಗುರುವಾರ ಸಾಯಂಕಾಲ ನಗರದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಸಮಾವೇಶದಲ್ಲಿ ಬಿಜೆಪಿ ಸರಕಾರದ ದುರಾಡಳಿತ ವಿಶೇಷವಾಗಿ ಎಸ್.ಸಿ, ಎಸ್.ಟಿ ಸಮುದಾಯಗಳಿಗೆ ಮಾಡಿರುವ ಅನ್ಯಾಯವನ್ನು ಅನಾವರಣ ಗೊಳಿಸಲಾಗುವುದು ಎಂದು ಹೇಳಿದರು.
ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲಿ ಈ ಸಮುದಾಯಗಳು ಇದ್ದು ಮೊದಲಿನಿಂದಲೂ ಪಕ್ಷವನ್ನು ಬೆಂಬಲಿಸುತ್ತಿವೆ. ಈ ಬಾರಿಯೂ ಎಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್ ಗೆ ಮತ ಹಾಕಿ ಬೆಂಬಲಿಸಲು ಸಮಾವೇಶದಲ್ಲಿ ಮನವಿ ಮಾಡಲಾಗುವುದು ಎಂದರು.
ಪರಿಶಿಷ್ಟ ಜಾತಿಯಲ್ಲಿ 101,
ಪರಿಶಿಷ್ಟ ಪಂಗಡದಲ್ಲಿ 52 ಜಾತಿ ಗಳಿವೆ. ಈ ಸಮುದಾಯಗಳು ಹಲವು ಕಾರಣಗಳಿಂದ ಹರಿದು ಹಂಚಿ ಹೋಗಿರುವುದರಿಂದ ಅಭಿವೃದ್ಧಿ ಆಗಿಲ್ಲ. ಈ ಹಿನ್ನಲೆಯಲ್ಲಿ ಒಗ್ಗಟ್ಟು ಮಾಡಿ ಮುಂಬರುವ ಚುನಾವಣೆಯಲ್ಲಿ ಆರಿಸಿ ಬರುವ ಕಾಂಗ್ರೆಸ್ ಸರ್ಕಾರ ನಿಮ್ಮ‌ ಜೊತೆಗಿರಲಿದೆ ಎಂಬ ಭರವಸೆ ನೀಡಲಾಗುವುದು, ಬಿಜೆಪಿಯವರು ಸಂವಿಧಾನ ವಿರುದ್ಧ ಇರುವ, ಬದಲಾಯಿಸುವ ಬಗ್ಗೆ ಮಾತನಾಡುವ ಕುರಿತಂತೆ ಜಾಗೃತಿ ಮೂಡಿಸಲಾಗುವುದು ಎಂದರು.
ತಮ್ಮ ಪಕ್ಷದ ಆಡಳಿತದಲ್ಲಿ 2013- 18 ರಲ್ಲಿ ಶೇ 24 ರಷ್ಟು ಹಣವನ್ನು ಬಜೆಟ್ ನಲ್ಲಿ ಮೀಸಲಿಟ್ಟು 78 ಸಾವಿರ ಕೋಟಿ ರೂ ಖರ್ಚು ಮಾಡಿತ್ತು.
ಆದರೆ ಬಿಜೆಪಿ ಸರ್ಕಾರ ಕೇವಲ 28 ಸಾವಿರ ಕೋಟಿ ಮೀಸಲಿಟ್ಟು ಅದರಲ್ಲಿ 8 ಸಾವಿರ ಕೋಟಿಯನ್ನು ಬೇರೆ ಉದ್ದೇಶಗಳಿಗೆ ಉಪಯೋಗಿಸಿದೆ ಎಂದು ದೂರಿದರು.
ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿಗೆ ಭೂ ಮಂಜೂರು, ಗಂಗಾ ಕಲ್ಯಾಣ, ಸ್ವ ಉದ್ಯೋಗ, ಕೈಗಾರಿಕೆಗಳ ಸ್ಥಾಪನೆ, ಪ್ರೋತ್ಸಾಹ ಧನ ನೀಡಿಕೆ ಮೊದಲಾದವುಗಳನ್ನು ಬಿಜೆಪಿ ಸರಕಾರ ಸ್ಥಗಿತಗೊಳಿಸಿದೆ ಎಂದರು.
ಪಕ್ಷದಲ್ಲಿ ನಾನು ಮೂಲೆ ಗುಂಪಾಗಿಲ್ಲ.. ನೇಪಥ್ಯಕ್ಕೆ ಸೇರಿಲ್ಲ. ಈಗಲೂ ನಾನು ಪವರ್ ಫುಲ್ ಆಗಿದ್ದೇನೆ. ಪ್ರಸ್ತುತ ಕೆಪಿಸಿಸಿ ಆದ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಅವರು, ಸಿ ಎಲ್ ಪಿ ನಾಯಕ ಸಿದ್ದರಾಮಯ್ಯ ಅವರು ಮುಂಚೂಣಿಯಲ್ಲಿರುವುದು ಸಹಜವಲ್ಲವೇ ಎಂದು ಡಾ.ಪರಮೇಶ್ವರ್ ಹೇಳಿದರು. .
ರಾಜ್ಯದಲ್ಲಿ ಪಕ್ಷ ಬಹುಮತಕ್ಕೆ ಬಂದರೆ ಶಾಸಕಾಂಗ ಸಭೆ ಕರೆದು, ಶಾಸಕರ ಒಲವು ಇರುವವರನ್ನು ಹೈಕಮಾಂಡ್ ಮುಖ್ಯ ಮಂತ್ರಿ ಅವರನ್ನು ಆಯ್ಕೆ ಮಾಡಲಿದೆ ಎಂದರು.
ಒಳಮೀಸಲಾತಿ ಕುರಿತ ಪಕ್ಷದ ನಿಲುವನ್ನು ಜ.8ರ ಸಮಾವೇಶದಲ್ಲಿ ಪ್ರಕಟಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾಜಿ ಸಚಿವರಾದ ಡಾ.ಹೆಚ್.ಸಿ. ಮಹದೇವಪ್ಪ, ಪಿ.ಟಿ.ಪರಮೇಶ್ವರ ನಾಯ್ಕ, ಈ ತುಕರಾಂ, ಮಾಜಿ ಸಂಸದ ಚಂದ್ರಪ್ಪ, ಶಾಸಕ ಬಿ.ನಾಗೇಂದ್ರ, ಜೆ. ಎನ್ ಗಣೇಶ್, ಮಹಾನಗರ ಪಾಲಿಕೆ ಮೇಯರ್ ಎಂ.ರಾಜೇಶ್ವರಿ, ಮಾಜಿ ಎಂ.ಎಲ್.ಸಿ ಕೆ.ಎಸ್.ಎಲ್ ಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ರಫೀಕ್, ಎಸ್ಟಿ ಘಟಕದ ಅಧ್ಯಕ್ಷ ಎರುಕಲಸ್ವಾಮಿ, ಪಕ್ಷದ ಜಿಲ್ಲಾ ಮುಖಂಡರುಗಳಾದ ಅಲ್ಲಂ ಪ್ರಶಾಂತ್, ಎ.ಮಾನಯ್ಯ, ಮುಂಡ್ರಿಗಿ ನಾಗರಾಜ್, ಶಿವರಾಜ್ ಹೆಗಡೆ, ಕಮಲಾ ಮರಿಸ್ವಾಮಿ, ಕಮಲಾ ಬಸವರಾಜ್ ಮತ್ತಿತರರು ಇದ್ದರು.
*****