ಸಿದ್ಧಾರ್ಥನ ಸ್ವಗತ
ಯಶೋಧರೆಯ ತೋಳಿನಲಿ
ಬೆಚ್ಚಗೆ ಮಲಗಬೇಕಾದವನಿಗೆ
ಏಕಿಂಥ ತೊಳಲಾಟ ?
ಅವಳ ಪ್ರೀತಿಯಲ್ಲಿಯೇ
ಸಾವು ಆವರಿಸುವ ಭೀತಿಯೇ ?
ಅವಳ ಕಣ್ಣ ಬೊಂಬೆಯೊಳಗೆ
ಮುಪ್ಪು ಅಡರುವ ಚಿಂತೆಯೇ ?
–
ಇದ್ದಕ್ಕಿದ್ದಂತೆ ಎಲ್ಲವನೂ
ತೊರೆದು ಹೊರಟ ನನಗೆ
ಅದಾವ ಬೆಳಕ ಕಾಣುವ
ಬಯಕೆಯೋ ?
–
ಇರುಳಿನ ಕುರುಡು ಕತ್ತಲೆಯಲಿ
ಸಾವ ಜಯಿಸುವ ಬೆಳಕಿನ ಹಂಬಲ
ಮುಪ್ಪನ್ನು ಛೇದಿಸುವ ಉತ್ಸಾಹ
ಕಾಯಿಲೆಯ ಹೆಡೆಮುರಿ ಕಟ್ಟಿ
ಹೂತುಹಾಕುವ ವೀರತನ
ಯಶೋಧರೆ ರಾಹುಲರ
ಪ್ರೀತಿಯ ಬಲೆಯಿಂದ ಹೊರಜಿಗಿದು
ನೀಲಾಗಸದ ಹೊಸ ಪ್ರೀತಿಯತ್ತ
ಹಾರುವ ತುಡಿತ
ಆಗಸದ ತೆಕ್ಕೆಯೊಳಗೆ
ಕುಳಿತು ಒಂದೊಂದೇ
ರಹಸ್ಯಗಳ ಭೇದಿಸುವ
ಕಂಡರಿಯದ ಕನಸು !
–
ನಿಜ ಬದುಕಿನ ಸಾಗರದೊಳು
ಮುಳುಗಿ ಎಲ್ಲರಿಗೆ
ಕಂಡೂ ಕಾಣದಂತಿರುವ
ಉತ್ತರಗಳ ಮುತ್ತುರತ್ನಗಳ
ಹೊತ್ತು ತರುವ ಚೇತನ
ಕನಸಿನ ಕುದುರೆಯೇರಿ ಹೊರಟ ನನಗೆ
ಪ್ರತಿ ದಿಕ್ಕಿನಲೂ
ಹೊಸತನದ ಬಾಗಿಲುಗಳು !
–
ಸಾಗಬೇಕು ಗುರಿ ತಲುಪಬೇಕು
ಈ ಸಿದ್ಧಾರ್ಥನ ಹೆಜ್ಜೆ
ಗುರುತುಗಳು ಸಾವನ್ನು ಜಯಿಸಿದಂತೆ
ಪಡಿಮೂಡಬೇಕು
ಬದುಕಿನ ರಹಸ್ಯಗಳ ಭೇದಿಸುವ
ಬೀಜಗಳಾಗಬೇಕು !
-ಸಿದ್ಧರಾಮ ಕೂಡ್ಲಿಗಿ
*****