ಅನುದಿನ‌ ಕವನ-೭೩೯, ಕವಯಿತ್ರಿ: ಭುವನಾ ಹಿರೇಮಠ, ಕಿತ್ತೂರು ಕವನದ ಶೀರ್ಷಿಕೆ:ಸುಖವೆಂಬುದೆಲ್ಲಿ ಮಾತಿನಲಿ

ಸುಖವೆಂಬುದೆಲ್ಲಿ ಮಾತಿನಲಿ

ಒಂದು ಸುದೀರ್ಘ ಮೌನದ
ತರುವಾಯ,
ನಾವಿಬ್ಬರೂ ಪರಿತ್ಯಕ್ತರಾದದ್ದು
ಆ ಪಾರಿವಾಳಕ್ಕೂ ತಿಳಿದಿದೆ

ತೆರೆ ಎದ್ದು ಬಿದ್ದು
ಬೂದುಬಣ್ಣದ ಮರಳನೇ
ಉಟ್ಟುಂಡು ಬಿಸಾಡಿ,
ಸೂರ್ಯನ ಶಪಿಸಿ
ಚಂದ್ರನ ಜಪಿಸಿಯೂ
ಮಲಗಲಾಗುತಿಲ್ಲ ನಮಗೆ

ಸಂಖ್ಯಾತೀತ ಪ್ರೇಮಿಗಳೆಲ್ಲ
ಈ ಸ್ನೇಹಹೀನ ದೀಪದ
ನೆರಳಿನಡಿಯೇ
ಮಲಗಿ ಚಿರನಿದ್ರೆಗೆ ಜಾರುವುದು
ಏಕೆ?

ಹಾಗಾಗದಿರಲೆಂದೇ
ಸಂಗೀತದ ತಾರಕವನು
ಪರದೆಯ ಮೇಲಿನ ತಿಳಿನೀಲಿ ಬಣ್ಣಗಳಲ್ಲಿ
ಮಂದ್ರವನ್ನು ಆ ತಾಲೀಮಿನಲ್ಲಿ
ನಾಟಕವನ್ನು ಪಾತ್ರಧಾರಿಗಳ
ಗಂಟಲಿನಲ್ಲಿ
ನಾವು ಮಡಿಚಿಟ್ಟಿದ್ದೇವೆ

ಆದರೂ ನಮ್ಮ ಅಳತೆಗೆ ಸಿಗದು
ಪರದೆಯ ಹಿಂದಿನ ಕೈವಾಡ

ಅದಕ್ಕೇ
ನಮ್ಮ ಶರೀರದ ಪಾಂಡಿತ್ಯ
ಭಸ್ಮಗೊಂಡ ದಿನ
ಎಲ್ಲವೂ ಮುಗಿಯಿತೆಂದು
ಕೈಚೆಲ್ಲಿ
ಒಬ್ಬರಿಗೊಬ್ಬರು ಬೆನ್ನು
ಕೊಟ್ಟು ಮಲಗಿದರೂ
ಪಾರಿವಾಳಕ್ಕೆ ನೆನಪಾಗುತ್ತದೆ
ನಾವಿಬ್ಬರೂ ಅಜ್ಞಾತದಲ್ಲಿ
ಕಟುವಾಗಿ ಪ್ರೇಮಿಸಿದ್ದು

-ಭುವನಾ ಹಿರೇಮಠ, ಕಿತ್ತೂರು, ಬೆಳಗಾವಿ ಜಿ.
*****