ಸಂಭ್ರಮದ ಸಂಕ್ರಾಂತಿ
ವರ್ಷದ ಪ್ರಥಮ ಹಬ್ಬ ಬಂದೈತಿ
ಸೂರ್ಯ ತನ್ನ ದಿಕ್ಕು ಬದಲಿಸುವ ದಿನ
ಸಂತಸ ಸಡಗರವ ಹೊತ್ತು ತಂದೈತಿ
ಅದುವೇ ಮಕರ ಸಂಕ್ರಾಂತಿಯ ಸುದಿನ //
ಎಳ್ಳು ಬೆಲ್ಲ ಕಬ್ಬು ಹಂಚೋಣ ಬಾರವ್ವ
ಎಲ್ಲಾರ ಮನಿ ಮನೀಗೆ ಹೋಗಿ
ಒಳ್ಳೆಯ ಮಾತನ್ನೇ ಆಡೋಣ, ಚೆಂದಾಗಿ ಹೇಳೋಣವ್ವ
ಭವಿಷ್ಯದ ಭರವಸೆಯಲಿ ಸಾಗಿ //
ಎಣ್ಣಿ ಹೋಳಿಗಿ, ಶೇಂಗಾ ಹೋಳಿಗಿ ಸಿಹಿ ಅಡುಗಿ
ಮನಿ ಮಂದಿ ಸೇರಿ ಮಾಡೋಣವ್ವ
ಎಳ್ಳು ಹಚ್ಚಿ ರೊಟ್ಟಿ ಮಾಡೇದ ಖಡಕ್ಕಾಗಿ
ತರ ತರದ ಪಲ್ಯ, ಮೊಸರ ಬುತ್ತಿ ಬುಟ್ಟಿ ತುಂಬೋಣವ್ವ //
ಗಂಗಾ ಮಾತೆಯಲ್ಲಿ ಮಿಂದು ಬೇಡೋಣವ್ವ
ದ್ವೇಷ, ಅಸೂಯೆಯ ಹಳೆಕೊಳೆಯ ತೊಲಗಲಿ ಎಂದು
ಅರಿಷಿಣ – ಕುಂಕುಮ, ಹೂವು ಪತ್ರೆಯ ಹಾಕೋಣವ್ವ
ಸಮೃದ್ಧಿಯ ಜೀವನ ಸಾಗಲಿ ಎಂದೆಂದೂ //
ತಮವ ಕಳೆದು ಬೆಳಕು ನೀಡೆಂದು ಕೈಮುಗಿಯೋಣವ್ವ
ಪ್ರತಿ ಜೀವಿಗಳು ಸುಖದಿ ಸಂತೃಪ್ತಿಯಾಗಲಿ
ಮಕರ ಜ್ಯೋತಿಯು ಭುವಿಯ ಬೆಳಗಿತವ್ವ
ಬರೆಯಿತು ಹೊಸ ವರುಷದ ಮುನ್ನುಡಿಯಲ್ಲಿ //
-ಶೋಭಾ ಪ್ರಕಾಶ್ ಮಲ್ಕಿ ಒಡೆಯರ್✍🏻
ಹೂವಿನ ಹಡಗಲಿ
*****