ಬಳ್ಳಾರಿ,ಜ.15: ಬಯಲಾಟ ಜನಪದ ರಂಗಭೂಮಿಯ ವಿಶಿಷ್ಟವಾದ ಗಂಡು ಕಲೆ ಎಂದು
ಸರಳಾದೇವಿ ಸರಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಹಾಗೂ ನಾಟಕ ವಿಭಾಗದ ಮುಖ್ಯಸ್ಥ ಡಾ.ದಸ್ತಗೀರಸಾಬ್ ದಿನ್ನಿ ಅವರು ಹೇಳಿದರು.
ಆಲಾಪ್ ಸಂಗೀತ ಕಲಾ ಟ್ರಸ್ಟ್ (ರಿ) ಬಳ್ಳಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ವಿಶೇಷ ಘಟಕ ಯೋಜನೆಯಡಿ ತಾಲೂಕಿನ ಕೊರ್ಲಗುಂದಿ ಗ್ರಾಮದ ಶ್ರೀ ಅಡವಿ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಸಂಕ್ರಾಂತಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಿನಿಮಾ-ದೂರದರ್ಶನದಂತಹ ಆಧುನಿಕ ಮಾಧ್ಯಮಗಳ ಭರಾಟೆಯಲ್ಲಿ ಬಯಲಾಟ ಕಲೆ ನಶಿಸುತ್ತಿದೆ ಎಂದು ವಿಷಾಧಿಸಿದರು.
ಈ ಕಲೆಯನ್ನು ಉಳಿಸಿಕೊಂಡು ಹೋಗಬೇಕಾದದು ನಮ್ಮೆಲ್ಲರ ಸಾಂಸ್ಕೃತಿಕ ಹೊಣೆಗಾರಿಕೆ. ಬಯಲಾಟವು ಮನೋರಂಜನೆಯ ಜೊತೆಗೆ ಪುರಾಣ ಕಲ್ಪನೆ , ಭಕ್ತಿ , ಸತ್ಯ ,ವೈರಾಗ್ಯ, ನೀತಿಯನ್ನು ದರ್ಶಿಸುತ್ತದೆ ಎಂದರು.
ಗಟ್ಟಿ ಸಂಭಾಷಣೆ ,ಕುಣಿತ , ಸಂಗೀತದಂತಹ ಚಹರೆಗಳಿಂದ ಪ್ರೇಕ್ಷಕರನ್ನು ಆಕರ್ಷಿಸುವ ಈ ಕಲೆ ಗ್ರಾಮೀಣ ಪ್ರದೇಶದಲ್ಲಿ ಜೀವಂತವಾಗಿರುವುದು ಸಂತೋಷದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ಹೊಸ ತಲೆಮಾರು ಇಂತಹ ಕಲೆಗಳ ಬಗೆಗೆ ಆಸಕ್ತಿ ಮತ್ತು ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ವಿಶೇಷವಾಗಿ ಮಹಿಳಾ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುವುದರ ಮೂಲಕ ಪ್ರೋತ್ಸಾಹಿಸಬೇಕೆಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಬಯಲಾಟ ಅಕಾಡೆಮಿಯ ಸದಸ್ಯ ಎಚ್ ತಿಪ್ಪೇಸ್ವಾಮಿ ಅವರು ಮಾತನಾಡಿ, ಹಳ್ಳಿಗಳಲ್ಲಿ ಬಯಲಾಟ ಎಂದು ಕೂಡಲೇ ಹಬ್ಬದ ವಾತಾವರಣ ಸಡಗರ ಕಂಡುಬರುತ್ತದೆ ನಾಟಕಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗುವುದು ಹಳ್ಳಿಗಳಲ್ಲಿ ಮಾತ್ರ ಎಂದು ತಿಳಿಸಿದರು.
ಕೊರ್ಲಗುಂದಿ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಶ್ರೀಮತಿ ಮಲ್ಲಮ್ಮ, ಉಪಾಧ್ಯಕ್ಷ ವೀರ ರಾಘವ ರೆಡ್ಡಿ ಮತ್ತು ಗಾಪಂ ಎಲ್ಲಾ ಸದಸ್ಯರು, ಬಯಲಾಟ ಪರಿಷತ್ತು ಅಧ್ಯಕ್ಷ ಬಿ ನಾಗನಗೌಡ ಮತ್ತು ಆಲಾಪ ಟ್ರಸ್ಟ್ ಅಧ್ಯಕ್ಷ ರಮಣಪ್ಪ ಭಜಂತ್ರಿ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ: ಬಳಿಕ ಜಾನಪದ ಗೀತೆಗಳನ್ನು ಕೆ.ತಾಯಪ್ಪ ಕಲಾತಂಡ ಹಾಗೂ ಬಯಲಾಟ ರಂಗಗೀತೆಗಳನ್ನು ಶ್ರೀಮತಿ ಮಂಜಮ್ಮ ದಾವಣಗೆರೆ ಕಲಾತಂಡದವರು ಪ್ರಸ್ತುತ ಪಡಿಸಿದರು “ಭಾರ್ಗವ ಪರಶುರಾಮ” ಬಯಲಾಟವನ್ನು ಹೆಚ್.ತಿಪ್ಪೇಸ್ವಾಮಿ ಮತ್ತು ತಂಡದವರು ಪ್ರದರ್ಶಿಸಿದರು.
ರಮಣಪ್ಪ ಭಜಂತ್ರಿ ಸ್ವಾಗತಿಸಿದರು.ಜಡೇಶ ಎಮ್ಮಿಗನೂರು ವಂದಿಸಿದರು. ವಿಷ್ಣು ಹಡಪದ ವಂದಿಸಿದರು. ನಾಗನಗೌಡ ಪ್ರಾರ್ಥಿಸಿದರು.
*****