ಕಂಚೀ ಕದಲು…
ನಿನ್ನ ಕಣ್ಣಲ್ಲೊಂದು ಉಕ್ಕುವ ಕಡಲು
ನಿಗೂಢ ನೀಲಿ, ನಿರ್ಲಿಪ್ತ ಅಲೆ
ಜಾರುವ ಮರಳು, ಅಚ್ಚರಿಯ ಹೊರಳು
ಅರಳುಗಣ್ಣಲ್ಲಿ ನಿನ್ನ ನೋಡುತ್ತಲಿದ್ದೆ !
ಹುಡುಗಾಟ, ಚಿಟ್ಟೆ ಹಿಡಿಯಲು ಓಟ
ಸಾವು ಸವರಿ ಹೋದರು
ಹಸುಗೂಸಿನ ನೋಟ, ಮಾಟ
ಬೆರಗುಗಣ್ಣಲ್ಲಿ ನನ್ನ ನೋಡುತ್ತಲಿದ್ದೆ!
ಕನಸಿನೊಳಗೊಂದು ಕನಸು ಸೇರಿ
ತಂತಾನೇ ತೆರೆದ ಅನೂಹ್ಯ ದಾರಿ
ತೆರೆಮರೆಯಲ್ಲಿ ಮರ್ಮರಿಸಿದೆ ನಾನು
ಮಳೆಬಿಲ್ಲ ಬಣ್ಣ ಬಳಕೊಂಡೆ ನೀನು
ಕಣ್ಣಿನೊಂದಿಗೆ, ಬಟ್ಟೆ, ಭಾವದೊಂದಿಗೆ
ನಕ್ಕು, ಹೊಕ್ಕ ಮಾಯಾಲೋಕ
ಮಾತು-ಮೌನ, ಹಗಲು-ಇರುಳು
ಭ್ರಮೆ-ವಾಸ್ತವದ ಕಲಸು ಮೆಲಸು
ವರುಷಗಳು ಜಾರಿ, ಸೋರಿ,
ಕಣ್ಣಾಮುಚ್ಚಾಲೆಯ ಪಟ್ಟಿ ಉದುರಿ…..
ನನ್ನ ಕಣ್ಣಲ್ಲೊಂದು ಉಕ್ಕುವ ಕಡಲು
ನಿಗೂಢ ನೀಲಿ, ನಿರ್ಲಿಪ್ತ ಅಲೆ
ಜಾರುವ ಮರಳು, ಅಚ್ಚರಿಯ ಹೊರಳು
ಅರಳುಗಣ್ಣಲ್ಲಿ ನನ್ನ ನೋಡುತ್ತಲಿದ್ದೆ !
ಹುಡುಗಾಟ, ಚಿಟ್ಟೆ ಹಿಡಿಯಲು ಓಟ
ಸಾವು ಸವರಿ ಹೋದರು
ಹಸುಗೂಸಿನ ನೋಟ, ಮಾಟ
ಬೆರಗುಗಣ್ಣಲ್ಲಿ ನಿನ್ನ ನೋಡುತ್ತಲಿದ್ದೆ!
-ಎಂ. ಆರ್ ಕಮಲ, ಬೆಂಗಳೂರು (ಯಾರೊಂದಿಗೋ ಕೆಲವು ಕಾಲವಿದ್ದರೆ ನಾವೇ ಅವರಾಗಿಬಿಡುವ ಅಥವಾ ಅವರೇ ನಾವಾಗಿಬಿಡುವ ವಿಸ್ಮಯ ನನ್ನನ್ನು ಕಾಡುತ್ತಿರುತ್ತದೆ. ಆ ಹಿನ್ನೆಲೆಯಲ್ಲಿ ಬರೆದಿದ್ದು)
*****