ಅನುದಿನ ಕವನ-೭೪೭, ಕವಯಿತ್ರಿ: ಮಧುರ ವೀಣಾ, ಬೆಂಗಳೂರು

ಶಸ್ತ್ರಚಿಕಿತ್ಸೆಗಿಂತಲೂ ಮುಂಚೆ ಸಾಯಿಸಿಹೆನು ಸಧ್ಯ
ಸತ್ತ ತೊಗಲನು ಕುಯ್ದರೇನು ಹೊಲಿದರೇನು
ಚುಚ್ಚಿದರೇನು, ರಕ್ತ ಹೀರಿದರೇನು

ಬಿಸಿ ರಕ್ತ ಅಭಿದಮನಿಗಳಲ್ಲಿ ಓಡಿ ಹರಿಯುತ್ತಿತ್ತೆಂದರೆ
ಎದೆಯು ಉದ್ವೇಗದಿಂದ ಲಬ್-ಡಬ್ ಬಡಿಯುತ್ತಿತ್ತೆಂದರೆ
ಕದಪುಗಳು ರೋಮಾಂಚನದಿಂದ ಕೆಂಪಾಗುತ್ತಿದ್ದವೆಂದರೆ
ನಂಬಲಾಗುವುದಿಲ್ಲ ಯಾರಿಗೂ ….

ಲಲಾಟ ಬೆವರಿನಿಂದ ತೊಯ್ದು ತೊಪ್ಪೆಯಾಗುತ್ತಿತ್ತೆಂದರೆ
ಜ್ವರದಿಂದ ಮೈ ಕಾವೇರಿ ಉರಿಯುತ್ತಿತ್ತೆಂದರೆ
ಜೊತೆ ತಿರುಗಿ ನವಿರಾಗಿ ಮುದ್ದಿಸಬೇಕೆನಿಸುತ್ತಿತ್ತೆಂದರೆ
ನಂಬಲಾಗುವುದಿಲ್ಲ ಯಾರಿಗೂ……

ಸತ್ತು ಬದುಕಿದ್ದೇನೆ ದೈವವಷಾತ್
ಶಸ್ತ್ರಚಿಕಿತ್ಸೆ ನನಗೀಗ ಶವಪರೀಕ್ಷೆ ಎಂದರೆ
ನಂಬಲಾಗುವುದಿಲ್ಲ ಯಾರಿಗೂ …..

-ಮಧುರ ವೀಣಾ, ಬೆಂಗಳೂರು
*****