ಅನುದಿನ ಕವನ-೭೪೯, ಹಿರಿಯ ಕವಿ:ಮಹಿಮ, ರಾಯಚೂರು, ಕವನದ ಶೀರ್ಷಿಕೆ: ನಾನು ನಂಬುತ್ತೇನೆ…

ನಾನು ನಂಬುತ್ತೇನೆ ನೀವು ಮೋಸ ಮಾಡಿದರೂ ಸಹ
ನಾನು ನಂಬುತ್ತೇನೆ ನೀವು ವಿಷ ಇಟ್ಟಿದ್ದರೂ ಇಟ್ಟರೂ ಸಹ

ನಾನು ನಂಬುತ್ತೇನೆ ನಮ್ಮವರೆಂದು, ನೀವು ಬೆನ್ನಿಗೆ ಚೂರಿ ಹಾಕಿದ್ದು ಗೊತ್ತಾದರೂ ಸಹ
ನಾನು ಮತ್ತೆ ಮತ್ತೆ ನಂಬುತ್ತೇನೆ ನಿಮ್ಮ ಮಾತುಗಳು ಕೃತಕವೆಂದು ಗೊತ್ತಾದರೂ ಸಹ

ನಾನು ನಂಬುತ್ತೇನೆ ಹಿಂದೊಂದು ಮುಂದೊಂದು ನೀವು ಮಾತನಾಡಿದ್ದು ಗೊತ್ತಾದರೂ ಸಹ
ನಾನು ನಂಬುತ್ತೇನೆ ನಿಮ್ಮ ವಿಶ್ವಾಸಘಾತುಕತನ ಗೊತ್ತಾದರೂ ಸಹ

ನಾನು ಮತ್ತೆ ಮತ್ತೆ ನಿಮ್ಮನ್ನು ನೆನೆನೆನೆದು ಪ್ರೀತಿಸುತ್ತೇನೆ ಅಭಿಮಾನಪಡುತ್ತೇನೆ
ಇನ್ನಾದರೂ ನೀವು ಬದಲಾಗುವಿರಿ ಎಂದು

ಎಲ್ಲವನ್ನೂ ಮಾಡಿ ಎಷ್ಟು ದಿನ ನೀವು ಬದುಕಬಲ್ಲಿರಿ?
ಏನು ಹೊತ್ತುಕೊಂಡು ಹೋಗುವಿರಿ?
ನಿಮ್ಮ ಬದುಕಿಗಾದರೂ ನೀವು ನೆನಪಿರಬೇಕಲ್ಲವೇ?
ಬದುಕು ನಿಮ್ಮನ್ನು ನೆನಪಿಟ್ಟುಕೊಳ್ಳಬೇಕಲ್ಲವೇ?

ಮತ್ತೆ ಮತ್ತೆ ನಂಬುತ್ತೇನೆ ನಂಬುತ್ತಲೇ ಇರುತ್ತೇನೆ
ನೀವು ಬದಲಾಗುವಿರಿ ಮನುಷ್ಯರಾಗುವಿರಿ ಎಂಬ ನಂಬುಗೆಯಿಂದ

ನಂಬುತ್ತಲೇ ಇರುತ್ತೇನೆ
ಅಮೃತ ವಿಷವಾದರೂ
ನಾನು ನಿರ್ಗಮಿಸುವವರೆಗೂ
ನಂಬುತ್ತಲೇ ಇರುತ್ತೇನೆ..

-ಮಹಿಮ, ರಾಯಚೂರು
*****