ಬಳ್ಳಾರಿ, ಜ.20: ಮಹಾ ಮಾನವತಾವಾದಿ ಡಾ.ಬಿ ಆರ್ ಅಂಬೇಡ್ಕರ್ ಅವರ ರಚನೆಯ ಭಾರತದ ಸಂವಿಧಾನ ಪೊರಕೆ ಹಿಡಿದ ಕೈಗಳಿಗೆ ಪುಸ್ತಕ, ಪೆನ್ನು ನೀಡಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎಸ್.ಸಿ.ಎಸ್. ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ.ಶಿವಶಂಕರ್ ಅವರು ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ಎಸ್.ಸಿ-ಎಸ್. ಟಿ ನೌಕರರ ಸಮನ್ವಯ ಸಮಿತಿ ಗುರುವಾರ ನಗರದ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಮಿತಿಯ ಬಳ್ಳಾರಿ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನ ದೇಶದ ಸಮಸ್ತ ಜನರ ಬದುಕನ್ನು ಹಸನಗೊಳಿಸುವ ಶ್ರೇಷ್ಠ ಗ್ರಂಥ. ಸರ್ವರಿಗೂ ಸಮಾನತೆ ಕಲ್ಪಿಸಿದೆ ಎಂದು ಶ್ಲಾಘಿಸಿದರು.
ದೇಶದ ಬಹುಜನರ ಬೆಳಕಾಗಿರುವ, ಭರವಸೆಯ ಸಂವಿಧಾನ ಪಟ್ಟಭದ್ರರ ಕೆಂಗಣ್ಣಿಗೆ ಗುರಿಯಾಗಿದೆ.
ದೇಶ ಕಟ್ಟಿದ ಶೋಷಿತ, ಹಿಂದುಳಿದ, ತಳಸಮುದಾಯಗಳೇ ಸಂವಿಧಾನವನ್ನು ರಕ್ಷಿಸಬೇಕಿದೆ. ಬಹುಜನರು ಒಗ್ಗಟ್ಟಾದರೆ ದೇಶವನ್ನು ಆಳ ಬಹುದು.
ನಾಳಿನ ಭಾರತ ನಮ್ಮದಾಗಬೇಕೆಂದರೆ ಶೋಷಿತ ಸಮುದಾಯಗಳು ಒಗ್ಗಟ್ಟಾಗಲೇ ಬೇಕು ಎಂದು ತಿಳಿಸಿದರು.
ದೇವರು, ಧರ್ಮದ ಹೆಸರಿನಲ್ಲಿ ರಕ್ತ ಹರಿಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದ ಶಿವಶಂಕರ್ ಅವರು
ರಾಕ್ಷಸ ಮಾನವರ ನಡುವೆ ನಡೆಯುತ್ತಿರುವ ಹೋರಾಟದಲ್ಲಿ ಮಾನವರಿಗೆ ಜಯಸಿಗಬೇಕು ಎಂದು ಮಾರ್ಮಿಕವಾಗಿ ನುಡಿದ ಅವರು
ಮಹಿಳೆಯರು, ದೀನ ದಲಿತರ ಶೋಷಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ವಿಷಾಧಿಸಿದರು.
ನೌಕರರ ಒಗ್ಗಟ್ಟು, ಹೋರಾಟದಿಂದ ನಮ್ಮ ಸಂವಿಧಾನಬದ್ಧ ಸೌಲಭ್ಯಗಳನ್ನು ಪಡೆಯಬಹುದು.
ನಮ್ಮ ಸಮನ್ವಯ ಸಮಿತಿಗೆ ಬಾಬಾಸಾಹೇಬ ಅಂಬೇಡ್ಕರ್, ಭಗವಾನ್ ಬುದ್ಧನೇ ನಾಯಕರು ಎಂದರು.
ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಉತ್ತಮ ಸಮಾಜದ ನಿರ್ಮಾಣಕ್ಕೆ ಸಮಿತಿ ಆದ್ಯತೆ ನೀಡುತ್ತದೆ ಎಂದು ಹೇಳಿದರು.
ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಎನ್. ವಿಜಯಕುಮಾರ್ ಅವರು ಮಾತನಾಡಿ, ನಾವೆಲ್ಲಾ ನಮ್ಮ ಪದವಿ, ಅರ್ಹತೆಯಿಂದ ನೌಕರಿ ಪಡೆದಿದ್ದೇವೆ ಎಂಬ ಭ್ರಮೆಯಲ್ಲಿ ಇದ್ದೇವೆ. ಆದರೆ ಬಾಬಾಸಾಹೇಬರ ಸಂವಿಧಾನ ನಮಗೆ ಸರಕಾರಿ ನೌಕರಿ ನೀಡಿದೆ ಎಂಬುದನ್ನು ಮರೆಯಬಾರದು ಎಂದರು. ನೌಕರರೆಲ್ಲರೂ ಸಮುದಾಯದ ಕಡೆಗೆ ಗಮನ ಹರಿಸಬೇಕು. ಹಳ್ಳಿಗಳತ್ತ ನಮ್ಮ ಗಮನ ಹರಿಸಬೇಕು. ಸಮುದಾಯದ ಬಡ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿ ವಿಎಸ್ ಕೆ ವಿವಿ ಪ್ರಾಧ್ಯಾಪಕ ಡಾ. ಶಾಂತನಾಯ್ಕ ಅವರು ಮಾತನಾಡಿ, ಡಾ.ಅಂಬೇಡ್ಕರ್ ಅವರ ವ್ಯಕ್ತಿತ್ವ ಅನನ್ಯ. ರಾಜಗುರು, ಪೆರಿಯಾರ್, ಫುಲೆ, ಅಂಬೇಡ್ಕರ್ ಅವರನ್ನು ಓದಬೇಕು.
ಬಾಬಾಸಾಹೇಬರ ನಿರ್ಭೀತ ವ್ಯಕ್ತಿತ್ಬಕ್ಕೆ ಅವರಲ್ಲಿದ್ದ ಜ್ಞಾನದ ಅರಿವು ಕಾರಣ. ಎದುರಾಳಿಗೆ ತಕ್ಕ ಉತ್ತರ ನೀಡುತ್ತಿದ್ದರು ಎಂದು ತಿಳಿಸಿದರು.
ಪೂರ್ವ ವಲಯದ ಬಿಇಓ ಕೆಂಪಯ್ಯ ಅವರು ಮಾತನಾಡಿ ಬಾಬಾಸಾಹೇಬರ ಋಣದಲ್ಲಿ ಜೀವಿಸುತ್ತಿರುವ ನಾವುಗಳು ಅವರ ತತ್ವಾದರ್ಶಗಳನ್ನು ಪಾಲಿಸುವ ಮೂಲಕ ನಮ್ಮಸಮುದಾಯಗಳ ಪ್ರಗತಿಗೆ ಶ್ರಮಿಸಬೇಕು ಎಂದರು.
ಸಿರುಗುಪ್ಪ ಬಿಇಓ ಹೆಚ್.ಗುರಪ್ಪ ಡಾ. ಅಂಬೇಡ್ಕರ್ ಅವರ ರಚನೆಯ ಸಂವಿಧಾನವನ್ನು ಓದಬೇಕು. ನೌಕರರು ಸಂಘಟಿತರಾಗಬೇಕು ಎಂದರು.
ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ನಿಂಗಪ್ಪ ಅವರು ಮಾತನಾಡಿ ಸಮನ್ವಯ ಸಮಿತಿಗೆ ನಮ್ಮ ಸಂಘದ ಸಂಪೂರ್ಣ ಬೆಂಬಲ ಇರುತ್ತದೆ ಎಂದು ಪ್ರಕಟಿಸಿದರು.
ಜಿಲ್ಲೆಯ ಸರಕಾರಿ ಎಸ್‌ಸಿ ಎಸ್ ಟಿ ನೌಕರರ ಸಮೀಕ್ಷೆ, ಪ್ರತಿಭಾವಂತ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಿಡಿಪಿಐ ಕಚೇರಿಯ ಇಓ ಗುರುಮೂರ್ತಿ ಅವರು
ಪದ್ಮಶ್ರೀ ಡಾ. ಸಿದ್ದಲಿಂಗಯ್ಯ ಅವರ ಕ್ರಾಂತಿ ಗೀತೆ ಹಾಡಿ ಗಮನ ಸೆಳೆದರು.
ವೇದಿಕೆಯಲ್ಲಿ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಆರ್.ಮೋಹನ್, ಕೆಂಪಸಿದ್ದಯ್ಯ, ಬಳ್ಳಾರಿ ಜಿಲ್ಲಾಧ್ಯಕ್ಷ ಟಿ.ವೆಂಕಟೇಶ್, ಜಗದೀಶ್, ಸಮಿತಿಯ ವಿಜಯನಗರ ಜಿಲ್ಲಾಧ್ಯಕ್ಷ ಜಿ. ಶಿವಕುಮಾರ್, ರಾಯಚೂರು ಜಿಲ್ಲಾ ಮಾಜಿ ಅಧ್ಯಕ್ಷ ರಾಜೀವ್, ಲೋಕೋಪಯೋಗಿ ಇಲಾಖೆಯ ಎ.ಇ ವೆಂಕಟರಮಣ, ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕರಾದ ಎ.ಕೆ ಸತ್ಯನಾರಾಯಣ, ವೀರೇಶಪ್ಪ, ಭಾಗವಹಿಸಿದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ ಈಚೆಗಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ಸಮಿತಿ ರಾಜ್ಯಾಧ್ಯಕ್ಷ ಶಿವಶಂಕರ್ ಅವರನ್ನು ಹಿರಿಯ ಸಾಹಿತಿ ಡಾ.ವೆಂಕಟಯ್ಯ ಅಪ್ಪಗೆರೆ, ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ, ಪತ್ರಕರ್ತ ಸಿ.ಮಂಜುನಾಥ, ವಿಜಯನಗರ ಜಿಲ್ಲಾಧ್ಯಕ್ಷ ಜಿ.ಶಿವಕುಮಾರ್, ಇಸಿಓ ಗೂಳಪ್ಪ ಬೆಳ್ಳೆಕಟ್ಟಿ, ಬಳ್ಳಾರಿ ಜಿಲ್ಲಾಧ್ಯಕ್ಷ ವೆಂಕಟೇಶ್ ಮತ್ತು ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಸಮಿತಿ ಜಿಲ್ಲಾ ಗೌರವಾಧ್ಯಕ್ಷ ಕೆ. ಹನುಮಂತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಬಿ.ರಾಘವೇಂದ್ರ ಸ್ವಾಗತಿಸಿದರು. ಜಿಲ್ಲಾ ಉಪಾಧ್ಯಕ್ಷ ಸಿ.ಹನುಮಪ್ಪ ನಿರೂಪಿಸಿದರು. ಜಿಲ್ಲಾ ಖಜಾಂಚಿ, ಅಧ್ಯಾಪಕ ಜಡೇಶ ವಂದಿಸಿದರು.
ಗಾಯಕ ಜಡೇಶ ಅವರು ಬಾಬಾಸಾಹೇಬರನ್ನು ಸ್ಮರಿಸುವ ಗೀತೆ ಮೂಲಕ ಪ್ರಾರ್ಥಿಸಿದರು.
*****