ಬಳ್ಳಾರಿ ಉತ್ಸವ: ಮಳಿಗೆಗಳ ಮುಂದೆ ಜನಸ್ತೋಮ ಉಚಿತ ಆರೋಗ್ಯ ಶಿಬಿರ, ಒಗ್ಗರಣೆ ಮಂಡಕ್ಕಿ ಮಿರ್ಚಿ ಸವಿ

ಬಳ್ಳಾರಿ,ಜ.21: ಮೊದಲ ಬಾರಿಗೆ ಆಯೋಜಿಸಲಾಗಿರುವ ಬಳ್ಳಾರಿ ಉತ್ಸವಕ್ಕೆ ನಗರ, ಜಿಲ್ಲೆಯ ಜನತೆಯಿಂದ ಉತ್ತಮ ಸ್ಪಂದನೆ ದೊರೆತಿದೆ.
ಉತ್ಸವದ ಮೊದಲ ದಿನ ನಗರದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ತಂಡೋಪ ತಂಡವಾಗಿ ಮುನಿಸಿಪಲ್ ಮೈದಾನಕ್ಕೆ ಆಗಮಿಸುತ್ತಿರುವ ಜನರು ಫಲಪುಷ್ಪ, ಮತ್ಸ್ಯಲೋಕ, ಮರಳು ಶಿಲ್ಪ, ವಿವಿಧ ಇಲಾಖೆ, ಆಹಾರ, ವಾಣಿಜ್ಯ ಮಳಿಗೆಗಳಿಗೆ ಭೇಟಿ ನೀಡಿ ಉತ್ಸವದಲ್ಲಿ ಸಂಭ್ರಮದಲ್ಲಿ ಪಾಲ್ಗೊಂಡು ಸಂತಸ ವ್ಯಕ್ತ ಪಡಿಸುತ್ತಿದ್ದಾರೆ. ಮುನ್ಸಿಪಲ್ ಮೈದಾನದ ರಾಘವ ವೇದಿಕೆ ಮುಂಭಾಗದಲ್ಲಿ ನೂರಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ.
ಕೃಷಿ ಇಲಾಖೆಯಿಂದ ಮಾದರಿ ಕಿರು ಜಲಾನಯನ ಪ್ರದೇಶ, ಕೃಷಿ ವಸ್ತ ಪ್ರದರ್ಶನ, ಸಾಂಪ್ರಾದಾಯಿಕ ಕೃಷಿ ಉಪಕರಣಗಳ ಪ್ರದರ್ಶನ, ಸಿರಿ ಧಾನ್ಯ ಪ್ರದರ್ಶನ ಏರ್ಪಡಿಸಲಾಗಿದೆ.
ಆರೋಗ್ಯ ಇಲಾಖೆಯಿಂದ ಸಾರ್ವಜನಿಕ ಆರೋಗ್ಯ, ಭ್ರೂಣ ಹತ್ಯೆ ನಿಷೇಧ, ಧೂಮಪಾನದ ಅಡ್ಡ ಪರಿಣಾಮಗಳು, ಗರ್ಭಿಣಿಯರ ಪೋಷಣೆ ಕುರಿತು ವಸ್ತು ಪ್ರದರ್ಶನ ಮಳಿಗೆ ತೆರೆಯಲಾಗಿದೆ.


ಸ್ಥಳದಲ್ಲಿ ತೆರೆಯಲಾಗಿರುವ ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಆರೋಗ್ಯ ಯೋಜನೆ, ಆರೋಗ್ಯ ಕರ್ನಾಟಕ ಮಳಿಗೆಯಲ್ಲಿ ಯೋಜನೆ ಕುರಿತು ಮಾಹಿತಿ ನೀಡುವುದರೊಂದಿಗೆ, ಎಬಿಆರ್‍ಕೆ ಕಾರ್ಡ್ ಸಹ ಮುದ್ರಿಸಿ ಕೊಡಲಾಗುತ್ತಿದೆ. ಉತ್ಸವದ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಳಿಗೆಗಳಲ್ಲಿ ಉದ್ಯೋಗ ಖಾತರಿ ಯೋಜನೆ, ಜಲ ಜೀವನ್ ಮಿಷನ್, ಮಳೆ ನೀರು ಕೊಯ್ಲು, ಬೂದು ನೀರು ನಿರ್ವಹಣೆ, ಘನ ತ್ಯಾಜ್ಯ ನಿರ್ವಹಣೆ ಮಾಹಿತಿಗಳನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ.
ಮಕ್ಕಳ ಮೇಲಿನ ದೌರ್ಜನ್ಯ ತಡೆ ಜಾಗೃತಿ ಮೂಡಿಸಲು ಉಚಿತ ಮಕ್ಕಳ ಸಹಾಯವಾಣಿ ಮಳಿಗೆ ತೆರೆಯಲಾಗಿದೆ. ಬಾಲ ಕಾರ್ಮಿಕ ಯೋಜನೆ ಕುರಿತು ಮಾಹಿತಿ ಫಲಕಗಳನ್ನು ಅಳವಡಿಸಲಾಗಿದೆ.
ಮಹಾನಗರ ಪಾಲಿಕೆ ಮಳಿಗೆಯಲ್ಲಿ ಘನ ಹಾಗೂ ದ್ರವ ತ್ಯಾಜ್ಯಗಳ ವಿಂಗಡಣೆ, ನಿರ್ವಹಣೆ ಹಾಗೂ ವಿಲೇವಾರಿ ಕುರಿತು ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ.
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಬಳ್ಳಾರಿ ನಗರ ಸಂಚಾರಿ ಪೊಲೀಸ್ ಇಲಾಖೆ ಮಳಿಗೆಯಲ್ಲಿ ರಸ್ತೆ ನಿಯಮಗಳ ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.


ಜಿಲ್ಲೆಯಲ್ಲಿ ರೇಷ್ಮೆ ಬೆಳೆ ಉತ್ತೇಜನ ನೀಡಲು ಹಾಗೂ ರೇಷ್ಮೆ ಉಪ ಉತ್ಪನ್ನಗಳ ಮಾಹಿತಿ ನೀಡಲು ರೇಷ್ಮೆ ಇಲಾಖೆ ವತಿಯಿಂದ ಮಳಿಗೆ ತೆರೆಯಲಾಗಿದೆ. ರೇಷ್ಮೆಯಿಂದ ತಯಾರಿಸಿದ ಹಾರಗಳು ನೋಡುಗರ ಗಮನ ಸಳೆಯುತ್ತಿವೆ. ಇದರೊಂದಿಗೆ ಅರಣ್ಯ, ಪ್ರವಾಸೋದ್ಯಮ, ಜಿಲ್ಲಾ ಕೈಗಾರಿಕಾ ಕೇಂದ್ರ, ಅಂಚೆ ಇಲಾಖೆ ಮಳಿಗೆಗಳಿವೆ.
ಒಗ್ಗರಣೆ ಮಂಡಕ್ಕಿ ಮಿರ್ಚಿ ಸವಿ; ಬಳ್ಳಾರಿ ಜಿಲ್ಲೆಯ ಪ್ರಸಿದ್ದ ಖಾದ್ಯ ಒಗ್ಗರಣೆ ಮಂಡಕ್ಕಿ ಮಿರ್ಚಿ ಸವಿಯಲು ಜನರು ಆಹಾರ ಮಳಿಗೆ ಮುಂದೆ ಜಮಾಯಿಸಿರುವುದು ಉತ್ಸವದಲ್ಲಿ ಸರ್ವೇ ಸಾಮಾನ್ಯ ದೃಶ್ಯವಾಗಿತ್ತು. ಇದರೊಂದಿಗೆ ಕುರುಕುಲು ತಿಂಡಿ, ಬೆಲ್ಲದ ಚಹಾ, ಪಾನೀಪುರಿ, ಗೋಬಿ ಮಂಚೂರಿ, ಪ್ರಸಿದ್ಧ ಬಿಸಿಮಿಲ್ಲಾ ಬಿರಿಯಾನಿ ಸೇರಿದಂತೆ ತರಹೇವಾರಿ ತಿಂಡಿ ತಿನಿಸುಗಳ ಮಳಿಗೆಗಳು ಇವೆ.
ಇದರೊಂದಿಗೆ ಹಳೆ ಕಾಲದ ನಾಣ್ಯಗಳು ಹಾಗೂ ಅಂಚೆ ಚೀಟಿ ಪ್ರದರ್ಶನ, ಶ್ರವಣ ಸಾಧನಗಳ ಕುರಿತ ಶ್ರವಣ ಎಜ್ಯುಕೇಷನ್ ಟ್ರಸ್ಟ್ ಮಳಿಗಗಳು ಜನರನ್ನು ಆಕರ್ಷಿಸುತ್ತಿವೆ.
ಇಂಡಿಯನ್ ಬ್ಯಾಂಕ್, ಕೆನರಾ, ಬ್ಯಾಂಕ್ ಆಪ್ ಬರೋಡಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಳಿಗೆಗಳು ಸ್ವ ನಿಧಿ ಮಹೋತ್ಸವ ಕುರಿತು ಮಳಿಗೆ ತೆರೆದು ಸಾರ್ವಜನಿಕರಿಗೆ ಮಾಹಿತಿ ನೀಡುತ್ತವೆ.
ಮಹಿಳಾ ಸಂಘ ಸಂಸ್ಥೆಗಳ ಉತ್ಪನ್ನ, ಗೃಹ ಕೈಗಾರಿಕೆ, ಬಟ್ಟೆ, ಜೀನ್ಸ್, ಕರಕುಶಲ ವಸ್ತಗಳು, ಸಾವಯವ ಪದಾರ್ಥಗಳು ಮುಂದೆ ಜನರ ಖರೀದಿ ಭರಾಟೆ ಹೆಚ್ಚು ಇದ್ದಿದ್ದು ಕಂಡು ಬಂದಿತು.
*****