ಅನುದಿನ ಕವನ-೭೫೨, ಕವಿ:ಮಧುಸೂಧನ ಬೆಳಗುಲಿ, ಮಡಿಕೇರಿ, ಕವನದ ಶೀರ್ಷಿಕೆ: ನನ್ನ ಡೈರಿ ಕಾಣೆಯಾಗಿದೆ

ನನ್ನ ಡೈರಿ ಕಾಣೆಯಾಗಿದೆ

‘ನನಗೆ ಮರೆವಿನ ಗುಣ ಬಹಳವಿದೆ’
ಇದು ಅವರಿವರು ಕೊಟ್ಟ ಹೇಳಿಕೆಯಲ್ಲ
ನನ್ನದೇ ಅನುಭವಜನ್ಯ ..

ಎಲ್ಲೋ ಇಟ್ಟು ಮತ್ತೆಲ್ಲೋ ಹುಡುಕುವುದು
ನಿತ್ಯದ ಕಥನ
ಕೆಲವೊಮ್ಮೆ ಬೈಗುಳ ತಿಂದಿದ್ದೂ ಮರೆತಿರುತ್ತೇನೆ
ಹಲಬಾರಿ ಮರೆವೂ ವರವಾಗಿದೆ.

ಮರೆಯಬಾರದ್ದನ್ನು ಗುರುತಿಟ್ಟುಕೊಳ್ಳಲು
ಸಾವಿರ ತಿಣುಕುಗಳು..
ಮನನಕ್ಕಾಗಿ ಬಾಯಿಪಾಠ ಮಾಡಿ
ಬಾಯಿ ಹರಿದುಕೊಂಡಿದ್ದೇನೆ.
ಅದನ್ನೂ ಮರೆತು ಹೈರಾಣಾಗಿದ್ದೇನೆ.

ಅವರಿವರ ಕಿವಿಮಾತಿಗೆ ಮಣೆಹಾಕಿ
ಡೈರಿಯಲ್ಲಿ ನಮೂದಿಸುತ್ತಿದ್ದೇನೆ.
ಮರೆಯಬಾರದೆಂಬುದಕ್ಕೆ…

ಕೊಟ್ಟದ್ದು, ಕೂಡಿಟ್ಟದ್ದು
ಎಂದೋ ಮರೆತದ್ದು,
ನೆನಪು ಮರುಕಳಿಸಿದ್ದು,
ಬುದ್ದಿಯಲಿ ಹೊಳೆದದ್ದು,
ಅಳಿಯಬಾರದ್ದು
ಎಲ್ಲವೂ ಇತ್ತು ಆ ಡೈರಿಯಲ್ಲಿ…

ಎಡಗೈಯಲ್ಲಿ ಇಟ್ಟು ಮರೆತ ಆ ಡೈರಿ
ಕಾಣೆಯಾಗಿದೆ ಮರೆವಿನಿಂದ
ಹುಡುಕುತ್ತಿದ್ದೇನೆ ಬಹುದಿನಗಳಿಂದ..

ದಯವಿಟ್ಟು ಹುಡುಕಿಕೊಡುತ್ತೀರಾ ?

ಮರೆಯದಂತೆ….

-ಮಧುಸೂಧನ ಬೆಳಗುಲಿ, ಮಡಿಕೇರಿ
*****