ಅನುದಿನ‌ ಕವನ-೭೫೩, ಕವಿ: ಬಿ.ಆರ್.ಕೆ (ಡಾ. ಬಿ ಆರ್ ಕೃಷ್ಣಕುಮಾರ), ಚಾಮರಾಜ ನಗರ, ಕವನದ ಶೀರ್ಷಿಕೆ: ಕಳೆದುಕೊಳ್ಳುವುದು

ಕಳೆದುಕೊಳ್ಳುವುದು

ಕಳೆದುಕೊಂಡವರೆಲ್ಲ
ಮತ್ತೆ ಸಿಗುವಂತಿದ್ದರೆ
ನಿನ್ನನ್ನು ಕಳೆದುಕೊಂಡಾಗ
ಜನರ ಕ್ರೂರ ಕಣ್ಣುಗಳೊಳಗೆ
ನನ್ನನ್ನು ಕಳೆದುಕೊಳ್ಳುತ್ತಿರಲಿಲ್ಲ

ಸವಿ ಸಾಂಗತ್ಯದಲ್ಲಿ
ಕಳೆದುಕೊಳ್ಳುವುದು ಒಂದು ವ್ಯಸನ
ಕಳೆದ ಸಲ ನೀ ಸಿಕ್ಕ ಜಾಗ
ಸದ್ದಿಲ್ಲದೆ ನಿನ್ನ ಇರುವಿಕೆಯ ಹಂಗಿಸಿದೆ.

ನನ್ನತನ ಕಳೆದುಕೊಂಡು
ನಿನ್ನೆಡೆಗೆ ನಡೆದ ಪಾದಯುಗ್ಮಗಳು
ನಿಲುಗಡೆಯ ಜಪದಲ್ಲಿ ತಲ್ಲೀನ
ಮರೆತ ಕವಿತೆ ಸಾಲು ದಿಗ್ಗನೆ ನೆನಪಾಗುವಂತೆ
ಉಸಿರ ನಿಲುಗಡೆಗೂ ಅವಕಾಶ ನೀಡದು ನಿನ್ನ ನೆನಪು.


-ಬಿ.ಆರ್.ಕೆ
(ಡಾ. ಬಿ ಆರ್ ಕೃಷ್ಣಕುಮಾರ), ಚಾಮರಾಜ ನಗರ
*****