ಹಗರಿಬೊಮ್ಮನಹಳ್ಳಿ, ಜ.೨೫: ಪ್ರಸಿದ್ಧ ಜಾನಪದ ಕಲಾವಿದ ದಿ. ಗೊಂದಲಿಗರ ದೇವೇಂದ್ರಪ್ಪ ಸೇರಿದಂತೆ ಹಲವು ಕಲಾ ಪ್ರಕಾರಗಳ ಕಲಾವಿದರು ಬದುಕಿ, ಬಾಳುತ್ತಿರುವ ಹಂಪಾಪಟ್ಟಣ ಸಾಂಸ್ಕೃತಿಕ ಗ್ರಾಮ ಎಂದು ಕರ್ನಾಟಕ ಜಾನಪದ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷೆ, ಪದ್ಮಶ್ರೀ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ಅವರು ಬಣ್ಣಿಸಿದರು.
ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಮಂಗಳವಾರ ನೂತನ ಶ್ರೀಮಾತಾ ಸೇವಾಟ್ರಸ್ಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ನಲವತ್ತು ವರ್ಷಗಳ ಹಿಂದೆಯೇ ಗೊಂದಲಿಗರ ದೇವೇಂದ್ರಪ್ಪ ಅವರು ಧಾರವಾಡ ಆಕಾಶವಾಣಿಯಲ್ಲಿ ಗೊಂದಲಿಗರ ಹಾಡುಗಳನ್ನು ಹಾಡಿ ಗ್ರಾಮಕ್ಕೆ ಹೆಸರು ತಂದವರು ಮಾತ್ರವಲ್ಲ ತಮ್ಮ ಪ್ರತಿಭೆ, ಸಾಧನೆ ಮೂಲಕ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಗಳಿಸಿ ಗ್ರಾಮಕ್ಕೆ ಕೀರ್ತಿ ತಂದವರು ಎಂದು ಕೊಂಡಾಡಿದರು.
ಗ್ರಾಮದ ಮೊದಲ ಪತ್ರಕರ್ತನೆಂಬ ಗೌರವಕ್ಕೆ ಪಾತ್ರರಾಗಿರುವ ಸಿ. ಮಂಜುನಾಥ ಅವರು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದರೆ, ಕಳೆದ ವರ್ಷ ಗೊಂದಲಿಗರ ರಾಮಣ್ಣ ಅವರು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾಗಿ, ಮೂರನೆಯ ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿ ಗಳಿಸಿ ಗ್ರಾಮಕ್ಕೆ ಹೆಸರು ತಂದವರು ಎಂದು ಹೇಳಿದರು.
ಕಲಾ ಗ್ರಾಮ ಎಂಬ ಹೆಗ್ಗಳಿಕೆಯ ಮರಿಯಮ್ಮನಹಳ್ಳಿ ಸಮೀಪದ ಹಂಪಾಪಟ್ಟಣದಲ್ಲಿ ಬಯಲಾಟ, ಕೋಲಾಟ, ತಮಟೆ, ಕಹಳೆ, ಡೊಳ್ಳು, ಮರಕುಣಿತ ಸೇರಿದಂತೆ ಹತ್ತಾರು ಕಲಾಪ್ರಕಾರಗಳ ಕಲಾವಿದರು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದ್ದಾರೆ ಎಂದು ಶ್ಲಾಘಿಸಿದ ಅವರು ಗ್ರಾಮದ ಜತೆ ತಮ್ಮ ದಶಕಗಳ ಜನಪದ ಒಡನಾಟವನ್ನು ಸ್ಮರಿಸಿದರು.
ದೇಶದ ಮಹಿಳೆಯರಿಗೆ ಸ್ವಾತಂತ್ರ್ಯ ಮತ್ತು ಸಮಾನತೆ ಲಭಿಸಿರುವುದು ಭಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಿಂದ ಎಂದು ತಿಳಿಸಿದರು.
ಬಸವಣ್ಣ ಮತ್ತು ಡಾ. ಅಂಬೇಡ್ಕರ್ ಅವರಿಂದ ಹೆಣ್ಣುಮಕ್ಕಳಿಗೆ ಉನ್ನತ ಹುದ್ದೆ, ಸ್ಥಾನಮಾನಗಳು ದೊರಕಿವೆ ಎಂದು ಅಭಿಪ್ರಾಯ ಪಟ್ಟ ಅವರು ತೃತೀಯಲಿಂಗಿಗಳು ಸರಕಾರಿ ನೌಕರಿ, ಪ್ರಶಸ್ತಿ ಪುರಸ್ಕಾರಗಳು ದೊರೆಯುತ್ತಿರುವುದು ಭಾರತದ ಸಂವಿದಾನದಿಂದ ಎಂದರು.
ಯಶಸ್ಸುಗಳಿಸಲು ಸಮಯಪ್ರಜ್ಞೆ, ತಾಳ್ಮೆ ಅತ್ಯಗತ್ಯ. ಪೋಷಕರು ಮಕ್ಕಳ ಕೈಗೆ ಮೊಬೈಲ್ ಕೊಡುವ ಬದಲು ಪುಸ್ತಕಗಳನ್ನು ನೀಡಬೇಕು ಎಂದು ಸಲಹೆ ನೀಡಿದರು.
ಸಮಾಜಮುಖಿ ಕಾರ್ಯಗಳ ಮೂಲಕ ಶ್ರೀ ಮಾತಾಸೇವಾ ಟ್ರಸ್ಟ್ ಜನಮನ ಗೆಲ್ಲಲಿ ಎಂದು ಹಾರೈಸಿದರು.
ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿದ್ದ ಹಿರಿಯ ಪತ್ರಕರ್ತ ಸಿ.ಮಂಜುನಾಥ ಮಾತನಾಡಿ, ಹಂಪಾಪಟ್ಟಣ ಗ್ರಾಮ ಸಾಮರಸ್ಯ, ಸಮಾನತೆ, ಧಾರ್ಮಿಕ ಸಹಿಷ್ಣುತೆಗೆ ಹೆಸರಾದ ಗ್ರಾಮ. ವಿವಿಧ ಜಾತಿ, ಧರ್ಮದವರು ಸಹೋದರರಂತೆ ಬಾಳುತ್ತಿದ್ದು ಇತರೆ ಊರುಗಳಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಸರಕಾರ, ಗ್ರಾಮಪಂಚಾಯಿತಿ, ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪ್ರತಿವರ್ಷವೂ ಹಂಪಾಪಟ್ಟಣ ಉತ್ಸವವನ್ನು ಆಚರಿಸುವ ಮೂಲಕ ಮತ್ತಷ್ಟು ಸಾಂಸ್ಕೃತಿಕ ಸಂಬಂಧಗಳನ್ನು ಗಟ್ಟಿಗೊಳಿಸಬೇಕು ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ವಿಜಯನಗರ ಜಿಲ್ಲಾ ಘಟಕ ಉಪಾಧ್ಯಕ್ಷ ಬುಡ್ಡಿ ಬಸವರಾಜ ಅವರು ಮಾತನಾಡಿ ಸಮಾಜದ ತಾರತಮ್ಯ, ಶೋಷಣೆಯನ್ನು ಅನುಭವಿಸುತ್ತಲೇ ಜಾನಪದ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸುವ ಮೂಲಕ ದೇಶದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿರುವ ಮಾತಾ ಮಂಜಮ್ಮ ಜೋಗತಿ ಅವರು ಮಾದರಿ ಎಂದು ತಿಳಿಸಿದರು.
ಶ್ರೀ ಮಾತಾ ಸೇವಾಟ್ರಸ್ಟ್ ನ್ನು ಉದ್ಘಾಟಿಸಿದ ಕರ್ನಾಟಕ ಆರ್ಯ ವೈಶ್ಯ ಮಹಾಸಭಾದ ನಿರ್ದೇಶಕರೂ ಆಗಿರುವ ಕೊಪ್ಪಳ ಜಿಲ್ಲಾ ಘಟಕದ ಉಪಾಧ್ಯಕ್ಷ ನಾರಾಯಣ ಡಿ ಕುರುಗೋಡು ಅವರು ಮಾತನಾಡಿ ಸಮಾಜದ ಅಭಿವೃದ್ಧಿಯಲ್ಲಿ ಉತ್ತಮ ಶಿಕ್ಷಣ, ಸಂಸ್ಕಾರ ಅತ್ಯಗತ್ಯ ಎಂದರು.
ಯುವಕರು ಶಿಕ್ಷಣ ಪಡೆದು ಒಂದು ಉದ್ಯೋಗಕ್ಕೆ ಸೀಮಿತರಾಗದೇ ನೌಕರಿ ಸೃಷ್ಠಿಸುವ, ಉದ್ಯೋಗದಾತರಾಗಬೇಕು ಎಂದು ಕಿವಿಮಾತು ಹೇಳಿದರು. ಆರ್ಯ ವೈಶ್ಯ ಸಮಾಜದ ಬಡವರು ಸರಕಾರಿ ಸೌಲಭ್ಯ ಪಡೆದುಕೊಂಡು ಪ್ರಗತಿಹೊಂದಬೇಕು ಎಂದು ತಿಳಿಸಿದರು.
ಕೊಪ್ಪಳದ ಯುವ ನ್ಯಾಯವಾದಿ ಡಿ. ಗುರುರಾಜ, ಟಿ.ಮಹೇಂದ್ರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಂಪಾಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಲ್ಲಾಹುಣಸಿ ನಾಗರಾಜ್, ಉಪಾಧ್ಯಕ್ಷೆ ಶ್ರೀಮತಿ ಹನುಮಕ್ಕ ಹುಲುಗಪ್ಪ ಅವರು ಸೇರಿದಂತೆ ಗ್ರಾಪಂ ಸದಸ್ಯರಾದ ಸಿ.ಎಲ್ ಕುಮಾರ್, ಎಸ್.ಗಾಳೆಪ್ಪ, ಎಸ್.ನಾಗರಾಜ ನಾಯಕರ, ಶ್ರೀಮತಿ ಉಪ್ಪಾರ ಹುಲಿಗೆಮ್ಮ ಕಾಳಪ್ಪ, ತಿಪ್ಪಿಗುಂಡಿ ಮಂಜುನಾಥ್, ಶ್ರೀಮತಿ ಪತ್ರಿಗೀತಾ, ಶ್ರೀಮತಿ ಗುಬ್ಬೇರ ಮಂಜುಳ ಅಂಜಿನೆಪ್ಪ, ಆರ್ಯ ವೈಶ್ಯ ಸಂಘ, ಹಂಪಾಪಟ್ಟಣ ಘಟಕದ ಗೌರವಾಧ್ಯಕ್ಷ ಆರ್.ಜಿ ಬಸವರಾಜ್, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಜಿ.ತಿಮ್ಮಣ್ಣ, ಮಗಿಮಾವಿನಹಳ್ಳಿ ವಿಎಸ್‌ಎಸ್‌ಎನ್ ಅಧ್ಯಕ್ಷ ಪಿ.ಮಲ್ಲಿಕಾರ್ಜುನ, ಗ್ರಾಮದ ಮುಖಂಡರಾದ ಎಲಿಗಾರ ಕುಬೇರಪ್ಪ, ಜಿ.ಸತ್ಯನಾರಾಯಣ ಶೆಟ್ಟಿ, ಮಾರುತಿ ಭಜನಾ ಮಂಡಳಿ ಅಧ್ಯಕ್ಷ ಕಿಟಕಿ ಶಿವಣ್ಣ, ವೀರಶೈವ ಸಮಾಜದ ಮುಖಂಡ ಪಿ.ಶಿವನಗೌಡ್ರು, ಸಹಿಪ್ರಾ ಶಾಲೆಯ ಎಸ್.ಡಿಎಂಸಿ ಅಧ್ಯಕ್ಷ ಹೆಚ್.ಸೋಮನಾಥ್, ನವೋದಯ ಯುವಕ ಸಂಘದ ಅಧ್ಯಕ್ಷ ವಿ.ಹನುಮಂತ, ಕರವೇ ಗ್ರಾಮ ಘಟಕದ ಅಧ್ಯಕ್ಷ ಪೂಜಾರ ಸೋಮಣ್ಣ, ವಾಲ್ಮೀಕಿ ಸಮಾಜದ ಅಧ್ಯಕ್ಷ ಡಿ.ಹನುಮಂತಪ್ಪ, ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್ತು ತಾಲೂಕು ಅಧ್ಯಕ್ಷ ಹಡಗಲಿ ಖಾಜಾಸಾಬ್ ಅವರು ಉಪಸ್ಥಿತರಿದ್ದರು.
ಅಭಿನಂದನೆ: ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಅವರನ್ನು ಟ್ರಸ್ಟ್ ಪದಾಧಿಕಾರಿಗಳು ಸತ್ಕರಿಸಿ ಗೌರವಿಸಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ನ್ಯಾಯವಾದಿ ಡಿ.ಗುರುರಾಜ , ಜಿ. ವೆಂಕಣ್ಣ ಶೆಟ್ಟಿ, ಪೂರ್ಮ ಶ್ರೀನಾಥ್, ಟಿ.ಮಹೇಂದ್ರ, ಮಾಧವಿ ಚಿದ್ರಿ, ಶ್ರೀನಿವಾಸ ಬಳಗನೂರು, ಎಸ್. ನಾಗೇಂದ್ರ, ವಿರೇಶ್ ವಿ, ಕಾತ್ರೀಕಿ ಶ್ರೀನಿವಾಸ್, ಹೆಚ್ ಎಂ ರಾಘವೇಂದ್ರ, ಕಾರಂ ಬಾಬು ರಾಜೇಂದ್ರ ಪ್ರಸಾದ್, ಡಿಬಿಎಂ ಪ್ರಸಾದ್, ಭರತ್ ಗಂಗಾವತಿ ಮತ್ತು ರಮೇಶ ದೇವರಂಗಡಿ ಅವರನ್ನು ಟ್ರಸ್ಟ್ ಪರವಾಗಿ ಗಣ್ಯರು ಸನ್ಮಾನಿಸಿ ಗೌರವಿಸಿದರು.
ದಾಸರ ಪದಗಳು: ಹಗರಿಬೊಮ್ಮನಹಳ್ಳಿ ಕುಸುಮ ಭಜನಾ ಮಂಡಳಿಯ ಶ್ರೀಮತಿ ಮಾಧವಿ ಚಿದ್ರಿ ಮತ್ತು ಸಂಗಡಿಗರು ದಾಸರ ಪದಗಳನ್ನು ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಜಿ.ಶ್ರೀನಿವಾಸ ಶೆಟ್ಟಿ ಅವರು ಮಾತನಾಡಿ ಸಮಾಜ ಒಪ್ಪುವಂತೆ ಟ್ರಸ್ಟ್ ಕಾರ್ಯನಿರ್ವಹಿಸುತ್ತದೆ ಎಂದರು.
ಶ್ರೀನಿವಾಸ ಸ್ವಾಗತಿಸಿದರು. ಬಾರಿಕರ ಹುಲುಗಪ್ಪ ನಿರೂಪಿಸಿದರು. ಜಿ. ಯಂಕಣ್ಣ ಶೆಟ್ಟಿ ಮತ್ತು ಜಿ.ಸತ್ಯನಾರಾಯಣ ಶೆಟ್ಟಿ ನಿರ್ವಹಿಸಿದರು. ಗ್ರಾಮದ ಸರಸ್ವತಿ, ಜಿ ಸವಿತಾ, ವಿನುತ, ವೀರಮ್ಮ, ಸುಮಾ, ಸುಜಾತ ಪ್ರಾರ್ಥಿಸಿದರು.
*****