ಹಂಪಿ(ವಿಜಯನಗರ ಜಿಲ್ಲೆ),ಜ.27: ಹಂಪಿ ಉತ್ಸವವು ಕನ್ನಡ ನಾಡಿನ ಗತವೈಭವ ಬಿಂಬಿಸುವ ಉತ್ಸವ. ಕನ್ನಡ ನಾಡನ್ನಾಳಿದ ಪ್ರಮುಖ ಸಾಮ್ರಾಜ್ಯಗಳಲ್ಲಿ ಒಂದಾಗಿರುವ ಮತ್ತು ಇಡೀ ಭಾರತದ ಚರಿತ್ರೆಯಲ್ಲಿಯೇ ಪ್ರಮುಖ ಬದಲಾವಣೆ ತಂದಿರುವುದು ವಿಜಯನಗರ ಸಾಮ್ರಾಜ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಅವರು ಶುಕ್ರವಾರ ಸಂಜೆ ಹಂಪಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಜಯನಗರ ಹಾಗೂ ಕನ್ನಡ ನಾಡಿನ ಗತವೈಭವ ಬಿಂಬಿಸುವ ಸಡಗರ, ಸಂಭ್ರಮದ ಉತ್ಸವ ಹಂಪಿ ಉತ್ಸವವಾಗಿದೆ. ಎಂ.ಪಿ.ಪ್ರಕಾಶ್ ಅವರ ಕಾಲದಲ್ಲಿ ಹಂಪಿ ಉತ್ಸವ ಆರಂಭವಾಯಿತು.
ಪ್ರಥಮ ಹಂಪಿ ಉತ್ಸವದಲ್ಲಿ ಪಾಲ್ಗೊಂಡಿದ್ದನ್ನು ಇದೇ ಸಂದರ್ಭದಲ್ಲಿ ಸ್ಮರಿಸಿದ ಸಿಎಂ ಬೊಮ್ಮಾಯಿ ಅವರು
ಹಂಪಿಯ ಒಂದೊಂದು ಶಿಲೆಗಳು ಒಂದೊಂದು ರೋಮಾಂಚನಕಾರಿ ಕಥೆಗಳನ್ನು ಹೇಳುತ್ತವೆ;ಈ ಮೂಲಕ ಇತಿಹಾಸ ಗತವೈಭವ ಸಾರುತ್ತಿವೆ ಎಂದು ಬಣ್ಣಿಸಿದರು.
ಕೋವಿಡ್ ನಂತರ ಹಾಗೂ ಜಿಲ್ಲೆ ರಚನೆಯಾದ ನಂತರ ನಡೆಯುತ್ತಿರುವ ಹಂಪಿ ಉತ್ಸವ ಯಶಸ್ವಿಯಾಗಿ ನಡೆಯಲಿ ಮತ್ತು ಕಲೆ,ಸಂಸ್ಕ್ರತಿ, ಪರಂಪರೆ,ಇತಿಹಾಸ ಬಿಂಬಿಸಲಿ ಎಂದರು.
ಹಂಪಿ ಪ್ರವಾಸಿಗರಿಗೆ ಸಕಲಸೌಕರ್ಯಕ್ಕೆ ಕ್ರಮ: ಹಂಪಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಸಕಲ ಸೌಕರ್ಯಗಳನ್ನು ತಮ್ಮ ಸರಕಾರ ಕಲ್ಪಿಸಲಿದೆ.
ಪ್ರವಾಸಿಗರ ಅನುಕೂಲಕ್ಕಾಗಿ ಉತ್ತರ ಕರ್ನಾಟಕದಲ್ಲಿ ಹಂಪಿ ಸರ್ಕಿಟ್ ಮತ್ತು ದಕ್ಷಿಣ ಕರ್ನಾಟಕದಲ್ಲಿ ಮೈಸೂರನ್ನು ಸರ್ಕಿಟ್ ಆಗಿ ಶೀಘ್ರ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಪ್ರಕಟಿಸಿದರು.
ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗಾಗಿ 120ಕೋಟಿ ರೂ.ಗಳನ್ನು ನಮ್ಮ ಸರಕಾರ ನೀಡಿದ್ದು,ಇನ್ನೂ ಎರಡು ವಾರದೊಳಗೆ ಅಡಿಗಲ್ಲು ನೆರವೇರಿಸುವುದರ ಮೂಲಕ ಭಕ್ತರಿಗೆ ರೋಪ್ ವೇ,ರಸ್ತೆ ನಿರ್ಮಾಣ ಸೇರಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.
ವಿಜಯನಗರ ಮೌಲ್ಯಗಳನ್ನಿಟ್ಟುಕೊಂಡು ನವಕರ್ನಾಟಕ ನಿರ್ಮಾಣ: : ಅತ್ಯಂತ ಸುಭೀಕ್ಷೆಯ ಸಾಮ್ರಾಜ್ಯವಾಗಿದ್ದ ವಿಜಯನಗರ ಸಾಮ್ರಾಜ್ಯದ ಮೌಲ್ಯಗಳನ್ನಿಟ್ಟುಕೊಂಡು ಈಗಿನ ಅಗತ್ಯಕ್ಕೆ ತಕ್ಕಂತೆ ನವಕರ್ನಾಟಕ ನಿರ್ಮಾಣ ಮಾಡಲು ನಮ್ಮ ಸರಕಾರ ಬದ್ಧವಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ವಿಜ್ಞಾನ-ತಂತ್ರಜ್ಞಾನ,ಕೌಶಲ್ಯಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ. 5ಲಕ್ಷ ಯುವಕ/ಯುವತಿಯರಿಗೆ ಸ್ವಯಂ ಉದ್ಯೋಗಕ್ಕಾಗಿ ಯೋಜನೆಗಳನ್ನು ರೂಪಿಸಲಾಗಿದೆ. 6ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿ,3ಸಾವಿರ ಕಿ.ಮೀ ರಾಜ್ಯ ಹೆದ್ದಾರಿ ನಿರ್ಮಿಸಲು ಕ್ರಮವಹಿಸಲಾಗುತ್ತಿದೆ. 8 ಬಂದರುಗಳ ಆಧುನೀಕರಣ, 02 ಬಂದರುಗಳ ವಿಸ್ತರಣೆ,ರೈಲ್ವೆ ಯೋಜನೆಗಳಿಗೆ ಒತ್ತು ನೀಡಲಾಗುತ್ತಿದೆ ಎಂದರು.
8ಲಕ್ಷ ಕೋಟಿ ರೂ.ಹೂಡಿಕೆ ಈ ವರ್ಷ ಬರುವ ನಿರೀಕ್ಷೆ ಇದ್ದು;ಒಪ್ಪಂದ ಮಾಡಿಕೊಳ್ಳಲಾಗಿದೆ.ಉದ್ಯೋಗಗಳು ಹರಿದುಬರಲಿವೆ ಎಂದರು.
ಮುಜರಾಯಿ,ಹಜ್ ಮತ್ತು ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರು ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ನಾಡಿನ ಜನತೆಗೆ ಪರಿಚಯಿಸುವುದು ಅತ್ಯಂತ ಮುಖ್ಯವಾದುದು. ಈ ನಿಟ್ಟಿನಲ್ಲಿ 3ದಿನಗಳ ಕಾಲ ಹಂಪಿ ಉತ್ಸವ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ವೈವಿಧ್ಯಮಯ ಕಾರ್ಯಕ್ರಮಗಳು, ಪ್ರದರ್ಶನಗಳನ್ನಿಡಲಾಗಿದೆ. ಈ ಹಿಂದೆ ವಿಜಯನಗರ ಸಾಮ್ರಾಜ್ಯದ ರಾಜರು ಯಾವ ರೀತಿ ಕಲೆ,ಸಂಸ್ಕ್ರತಿ ಮತ್ತು ಇನ್ನಿತರ ಚಟುವಟಿಕೆಗಳಿಗೆ ಯಾವ ರೀತಿಯ ಒತ್ತು ನೀಡಿದ್ದರೋ ಅದೇ ರೀತಿಯ ಕಾರ್ಯಕ್ರಮಗಳು, ಪ್ರದರ್ಶನಗಳು ಇಲ್ಲಿ ಏರ್ಪಡಿಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಆನಂದಸಿಂಗ್ ಅವರು ಮಾತನಾಡಿದರು.
ಕನ್ನಡ ವಿವಿ ಹಂಪಿ ಕುರಿತು ಹೊರತರಲಾದ ನಾಲ್ಕು ಪುಸ್ತಕಗಳನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳಕಲ್ಯಾಣ ಹಾಗೂ ಹಿರಿಯ ನಾಗರಿಕ ಸಬಲೀಕರಣ ಸಚಿವ ಹಾಲಪ್ಪ ಬಸಪ್ಪ ಆಚಾರ್, ಸಂಸದರಾದ ವೈ.ದೇವೇಂದ್ರಪ್ಪ, ಸಂಗಣ್ಣ ಕರಡಿ, ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ಪರಣ್ಣ ಮನವಳ್ಳಿ, ಹುಡಾ ಅಧ್ಯಕ್ಷ ಅಶೋಕ್ ಜೀರೆ, ಹೊಸಪೇಟೆ ನಗರಸಭೆ ಅಧ್ಯಕ್ಷೆ ಸುಂಕಮ್ಮ, ವಿಜಯನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಐಜಿಪಿ ಬಿ.ಎಸ್.ಲೋಕೇಶಕುಮಾರ್, ಕನ್ನಡ ವಿವಿ ಕುಲಪತಿ ಡಾ. ಸ.ಚಿ. ರಮೇಶ, ಜಿಪಂ ಸಿಇಒ ಬೋಯರ್ ಹರ್ಷಲ್ ನಾರಾಯಣರಾವ್, ಎಸ್ಪಿ ಶ್ರೀಹರಿಬಾಬು ಮತ್ತಿತರರು ಇದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಜಯನಗರ ಕಲ್ಲಿನರಥದ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಜಿಲ್ಲಾಧಿಕಾರಿ ವೆಂಕಟೇಶ.ಟಿ ಅವರು ಸ್ವಾಗತಿಸಿದರು. ದಿವ್ಯ ಆಲೂರು ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣನವರ್ ವಂದಿಸಿದರು.
*****