ಜಗತ್ತು ಇನ್ನೂ ಮಲಗೆ ಇದೆ ಬುದ್ದ…
ಜಗತ್ತು ಇನ್ನೂ ಮಲಗೆ ಇದೆ
ಬುದ್ದ
ಆ ಸುದೀರ್ಘ ರಾತ್ರಿ
ನೀನು
ಜಗದ ಜನರ ಒಳಿತಿಗಾಗಿಯೆ
ರಾಜ್ಯಕೋಶ-
ಶ್ರೀಮಂತಿಕೆ ಎಲ್ಲವ ತೊರೆದು
ಶೂನ್ಯದೆಡೆಗೆ ನಡೆದದ್ದು ಮಾತ್ರ
ಯಾರಿಗೂ ಕಾಣುವುದಿಲ್ಲ ಬುದ್ದ
ಕಾರಣ
ಜಗತ್ತು ಇನ್ನೂ ಮಲಗೆ ಇದೆ ಬುದ್ದ…
ಇನ್ನೂ ಈ ಜನಕ್ಕೆ
ನಾವು ಮೇಲೆಂಬ ಹಪಹಪಿಯೆ ಇದೆ
ಕೀಳೆಂದು ಹಲವರ ಮುಟ್ಟಿಸಿಕೊಳ್ಳದ
ಚರ್ಮರೋಗವು ಇದೆ
ನೀನು ಸಮತೆಗಾಗಿಯೇ
ಎಲ್ಲವ ಕಳಕೊಂಡ
ಆ ಮದ್ಯೆರಾತ್ರಿಯ ನಿಟ್ಟುಸಿರ ಪಯಣ
ಇಲ್ಲಿ ಯಾರಿಗೂ ಕಾಣುವುದಿಲ್ಲ ಬುದ್ದ
ಕಾರಣ
ಜಗತ್ತು ಇನ್ನೂ ಮಲಗೆ ಇದೆ ಬುದ್ದ…
ನಿನ್ನ ಅಪ್ಪಿದವರು
ನಿನ್ನ ಒಪ್ಪಿದವರು ಕೂಡ
ನಾನಾ ವೇಷ ತೊಟ್ಟವರು
ಕ್ಷಣಾರ್ಧದಲ್ಲಿ ಬದಲಾಗುತ್ತಲೆ ಇರುವ ಗೊಸುಂಬೆಗಳು
ನಿನ್ನ ಹೆಸರೇಳಿ ಕೈಚಾಚಿ ನಿಂತ ಅನೀತಿವಂತರು
ಇವರಿಗೆ ಕಿವಿ ಕೇಳುವುದಿಲ್ಲ
ಕಣ್ಣು ಕಾಣಿಸುವುದಿಲ್ಲ
ಮೌಡ್ಯಕಂಟಿದವರು ಇದ್ದಾರೆ ಇಲ್ಲಿ
ಆದರೆ ನಿನ್ನ ಧ್ಯಾನದ
ಅವಿರತ ಪ್ರಯತ್ನ
ಜಗದ ಕ್ಷೇಮವ ಬಯಸಿದ
ನಿನ್ನೊಡಲ ಕಾರುಣ್ಯದ ಕಿಡಿ ತಾಕುವುದಿಲ್ಲ ಬುದ್ಧ
ಕಾರಣ
ಜಗತ್ತು ಇನ್ನೂ ಮಲಗೆ ಇದೆ ಬುದ್ದ…
-ಸಿದ್ದುಜನ್ನೂರ್, ಚಾಮರಾಜ ನಗರ
*****