ಬಳ್ಳಾರಿ, ಜ. 29: ರಾಜ್ಯೋತ್ಸವ ಪುರಸ್ಕೃತ ಹಿರಿಯ ರಂಗ ಕಲಾವಿದ ಎಂಬತ್ತರ ಹರೆಯದ ರಮೇಶ್ ಗೌಡ ಪಾಟೀಲ್ ಮತ್ತು ಹತ್ತರ ಹರೆಯದ ಸುಯೋಗ್ ವಿ. ಗೌಡ ಅವರ ನಟನೆಯ. ಶಿವೇಶ್ವರಗೌಡ ಕಲ್ಕಂಬ ಅವರ ನಿರ್ದೇಶನದಲ್ಲಿ ಡಾ.ಜೋಳದರಾಶಿ ದೊಡ್ಡನಗೌಡ ರಚನೆಯ, “ಸಾಯದವನ ನಾಟಕ” ನಿನ್ನೆ ಸಂಜೆ ನಗರದ ರಾಘವ ಕಲಾ ಮಂದಿರದಲ್ಲಿ ಪ್ರದರ್ಶನಗೊಂಡು ನೆರೆದ ಪ್ರೇಕ್ಷಕರ ಮನಸೂರೆಗೊಂಡಿತು.
ನಗರದ ರಾಘವ ಮೆಮೋರಿಯಲ್ ಅಸೋಸಿಯೇಷನ್ ತನ್ನ ಅಮೃತ ಮಹೋತ್ಸವದ ಅಂಗವಾಗಿ ಈ ನಾಟಕವನ್ನು ಆಯೋಜಿಸಿತ್ತು. ರಮೇಶ್ ಗೌಡ ಅವರು ತಮ್ಮ ಹಲವು ದಶಕಗಳ ನಟನಾನುಭವದಿಂದ ಕವಿರಾಜ ತಿಲಕ ಕಾರ್ತಿಕೇಯ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸಿದರೆ. ಸುಯೋಗ್ ವಿ.ಗೌಡ ಮೊಮ್ಮಗ ರವಿ ಪಾತ್ರದ ಮೂಲಕ ಇದೇ ಮೊದಲ ಬಾರಿಗೆ ರಂಗ ಪ್ರವೇಶ ಮಾಡಿ, ಉತ್ತಮ ಅಭಿನಯದ ಮೂಲಕ ಮೆಚ್ಚುಗೆ ಪಡೆದನು. ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಮತ್ತು ಹರ್ಷಾ ಆಚಾರ್ ಅವರ ಸಂಗೀತ್ ಸಂಯೋಜನೆ ಮತ್ತು ಹಾಡುಗಾರಿಕೆ.ಮಹಮ್ಮದ್ ದಾದಾಪೀರ್ ಮೇಕಪ್, ಅರುಣಾ ಸೌಂಡ್ಸ್ ಅವರ ಧ್ವನಿ ಬೆಳಕು ವ್ಯವಸ್ಥೆ, ಜೋಳದರಾಶಿ ಗ್ರಾಮ ಭಜನ ತಂಡ ನಾಟಕಕ್ಕೆ ಮತ್ತಷ್ಟು ಮೆರಗು ನೀಡಿತ್ತು. ನಾಟಕಕ್ಕೂ ಮುನ್ನ ನಗರದ ನಂದ ರೆಸಿಡೆನ್ಸಿ ಶಾಲಾ ಮಕ್ಕಳಿಂದ, ಮೂಕಾಭಿನಯ, ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ನಿಷ್ಟಿ ರುದ್ರಪ್ಪ, ಕಳೆದ 75 ವರ್ಷಗಳಿಂದ ರಂಗಭೂಮಿ ಸೇವೆಯನ್ನು ಸಲ್ಲಿಸುತ್ತಿರುವ ರಾಘವ ಮೆಮೋರಿಯಲ್ ಅಸೋಸಿಯೇಷನ್ ಕಾರ್ಯ ಶ್ಲಾಘನೀಯವಾದುದು. ಶಾಲಾ ಮಕ್ಕಳಿಗೆ ಪ್ರೋತ್ಸಾಹವನ್ನು ನೀಡುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಈ ಸಂಸ್ಥೆ ಹಮ್ಮಿಕೊಂಡಿದೆಂದರು. ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಕೆ. ಚನ್ನಪ್ಪನವರು ಮಾತನಾಡಿ, ಸಂಸ್ಥೆಯ 75ರ ಅಮೃತ ಮಹೋತ್ಸವದ ಅಂಗವಾಗಿ ತಿಂಗಳಿಗೆ ಒಂದರಂತೆ ಕನ್ನಡ ಮತ್ತು ತೆಲುಗು ನಾಟಕಗಳನ್ನು ಪ್ರದರ್ಶಿಸಬೇಕು ಎಂದು ತೀರ್ಮಾನಿಸಿ ಪ್ರತಿ ತಿಂಗಳು ನಾಟಕವನ್ನು ಪ್ರದರ್ಶಿಸುತ್ತಿದ್ದೇವೆ ಇದಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಮಕ್ಕಳಿಗಾಗಿ ಇನ್ನು ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದರು. ರಾಘವ ಮೆಮೋರಿಯಲ್ ಅಸೋಸಿಯೇಷನ್ ಉಪಾಧ್ಯಕ್ಷರಾದ ರಮೇಶ್ ಗೌಡ ಪಾಟೀಲ್, ವಿಷ್ಣುವರ್ಧನ ರೆಡ್ಡಿ, ಖಜಾಂಜಿ ಪಿ.ಧನಂಜಯ ಜಂಟಿ ಕಾರ್ಯದರ್ಶಿ ಎಂ.ರಾಮಾಂಜನೇಯಲು ವೇದಿಕೆ ಮೇಲೆ ಇದ್ದರು. ರಾಘವ ಮೆಮೋರಿಯಲ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಎಂ ರಾಮಾಂಜನೇಯ ವಂದಿಸಿದರು. ವಿಷ್ಣು ಹಡಪದ ನಿರೂಪಿಸಿದರು. ನಂದ ಶಾಲೆಯ ವಿದ್ಯಾರ್ಥಿನಿ ಪಲ್ಲವಿ ಪ್ರಾರ್ಥಿಸಿದರು. ನಾಡೋಜ ಬೆಳಗಲ್ಲು ವೀರಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶ್ರಾಂತ ಉಪ ನಿರ್ದೇಶಕ ಚೋರನೂರು ಟಿ. ಕೊಟ್ರಪ್ಪ, ಹಿರಿಯ ಪತ್ರಕರ್ತ ಎಂ.ಅಹಿರಾಜ್ ಜೆ ಪ್ರಭಾಕರ, ಕೆ ಶ್ಯಾಮಸುಂದರ್, ಎನ್. ವೀರಭದ್ರಗೌಡ, ಸಂಘಟಕ ರಮಣಪ್ಪ ಭಜಂತ್ರಿ, ನೇಥಿ ರಘುರಾಮ, ಪ್ರಕಾಶ, ಶಾಲಾ ಮಕ್ಕಳು, ಪೋಷಕರು ಕಲಾಭಿಮಾನಿಗಳು ಇದ್ದರು