ಆ ಎತ್ತರದ ಕೋಡುಗಲ್ಲಿಂದ
ಈ ಗುಡ್ಡದರೆಯ ಬಯಲಿಗೆ
ಒಮ್ಮೆ ಇಳಿದು ಬಾ ದೊರೆಯೆ
ನಿನ್ನೆಡೆಗೆ ಬರುವ ಹಾದಿ ಬಲು
ಕಡಿದು, ಹೇಗೆ ಏರುವುದಯ್ಯಾ
ಭವ ಭಾರ ಹೆಗಲಲ್ಲಿ ಹೊತ್ತು
ಭಾರ ಇಳಿಸುವವರೆಗೂ ಹೊತ್ತು
ಕಾಯುವುದಿಲ್ಲ ಗೊತ್ತಲ್ಲಾ ಪ್ರಭುವೆ
ಕುಣಿದು ಕುಂಭವ ಹೊತ್ತು ಮೆರೆದು
ಮೆಟ್ಟಿಲು ಕಲ್ಲಾದವರ ಕಥೆಗಳ
ಕೇಳುತ್ತಾ ನೋಡುತ್ತಾ ಕಂಗೆಟ್ಟು
ಗುಡ್ಡದ ಮುಂದೆ ಬೇಡುತ್ತಲಿರುವೆ
ನಿಂತೆಜ್ಜೆ ಎತ್ತಿಡಲಾರೆ ಮುಂದೋಡಿ
ದಣಿಯಲಾರೆ, ಎಲ್ಲಾ ಹಾದಿಯ
ಊರುಗಳೂ ನಿನ್ನ ಕಾಯುತ್ತಾ
ನಿಂತಲ್ಲಿಗೇ ಕಾಣುತ್ತಲಿರುವಾಗ
ಊರುಕೇರಿಯ ಸಂಗ ಬೇಡ ಗುರುವೆ
ಹಿಟ್ಟು ಸೊಪ್ಪಿಲ್ಲದೆ ಉಪ್ಪು ಹುಳಿಯಿಲ್ಲದೆ
ಅಟ್ಟು ಉಂಡವರೂ ಉಣಿಸಿ ಪೊರೆದವರೂ
ಬಂಡೆಗಳಿಗೆ ಎದೆ ಸೆಟೆದು ನಿಂತಿರುವರಂತೆ
ಕುಂತುನಿಂತೆಡೆ ಅವರು ಭಾರವಾಗುವುದಿಲ್ಲವಂತೆ
ಮಾಯದ ಗಾಯಗಳಿಗೆ ಮದ್ದು ಹಾಕುವರಂತೆ
ನೊಂದ ಸತ್ಯದ ಜೀವಗಳ ತಲೆ ಕಾಯುವರಂತೆ
ಬರಗಾಲ ಬಿರುಗಾಳಿ ಭೂಕಂಪಗಳಿಗೂ
ಅವರುಗಳು ನಿಂತೆಜ್ಜೆ ಸೋತಿಲ್ಲವಂತೆ
ಅಂಥವರ ಸೇವೆಗೆ ಕರೆದೊಯ್ಯೋ ಶಿವನೇ
-ಕೆ. ಪಿ. ಮಹಾದೇವಿ
ಅರಸೀಕೆರೆ
*****