ಅನುದಿನ‌ಕವನ-೭೬೨, ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್

ಗಜಲ್

ನೀಲಾಗಸದ ರವಿ ಕಣ್ಮುಚ್ಚುವಾಗ ನಿನ್ನದೇ ನೆನಪು
ಇರುಳಿನಲಿ ಶಶಿ ತಣ್ಣಗೆ ನಗುವಾಗ ನಿನ್ನದೇ ನೆನಪು

ಕೋಗಿಲೆಯ ಕಂಠದಲೂ ಅಡಗಿಹುದು ನಿನ್ನ ಕರೆ
ಮಾವು ಕೆಂದಳಿರ ಚಿಗುರಿಸುವಾಗ ನಿನ್ನದೇ ನೆನಪು

ದುಂಬಿಗಳು ಝೇಂಕರಿಸುವ ಸವಿಗಾನದಲು ನೀನು
ಮೊಗ್ಗುಗಳು ಮೈದುಂಬಿ ನಿಂತಾಗ ನಿನ್ನದೇ ನೆನಪು

ಯಾರಿಟ್ಟರೋ ಇರುಳಿನಾಗಸದಿ ಚಿಕ್ಕೆಗಳ ರಂಗೋಲಿ
ಕತ್ತಲು ಮೈಯನಾವರಿಸಿ ಕೆಣಕಿದಾಗ ನಿನ್ನದೇ ನೆನಪು

ಪ್ರೇಮ ನಭದ ಕೆಳಗೆ ವಿಸ್ಮಿತನಾಗಿ ನಿಂತಿಹನು ಸಿದ್ಧ
ಒಲವ ತೆರೆಗಳು ಎದೆಗೆ ತಾಕುವಾಗ ನಿನ್ನದೇ ನೆನಪು


-ಸಿದ್ಧರಾಮ ಕೂಡ್ಲಿಗಿ                                                   (ಚಿತ್ರಕೃಪೆ: ಅಂತರ್ಜಾಲ)                                             *****