ಅನುದಿನ ಕವನ-೭೬೩, ಕವಿ: ದುಡ್ಡನಹಳ್ಳಿ ಮಂಜುನಾಥ್, ತುಮಕೂರು ಕವನದ ಶೀರ್ಷಿಕೆ:ಎರೆಹುಳದ ಅನಾಟಮಿ

ಎರೆಹುಳದ ಅನಾಟಮಿ

ಮಣ್ಣು ನುಂಗುವ
ಎರೆಹುಳಕ್ಕೆ ಕಣ್ಣಿಲ್ಲ ಕಿವಿಯಿಲ್ಲ
ಮಣ್ಣು ನುಂಗಲು
ಅವು ಬೇಕಾಗಿಯೂ ಇಲ್ಲ

ಮಣ್ಣು ನುಂಗುವ
ಎರೆಹುಳಕ್ಕೆ ಕರುಳಿಲ್ಲ ಮೆದುಳಿಲ್ಲ
ಅವು ಇದ್ದವರು
ಮಣ್ಣು ನುಂಗುವುದಿಲ್ಲ

ಹಾಳಾದ ಎರೇಹುಳಕ್ಕೆ
ಹೃದಯವೂ ಇಲ್ಲ
ಮಣ್ಣು ತುಂಬಿದ ಕವಾಟಗಳು
ಮಿಡಿಯುವುದಿಲ್ಲ

ಅಲ್ಲಿಂದ ನುಂಗಿ
ಇಲ್ಲಿಂದ ಹೊರಬಂದ ಮಣ್ಣನ್ನು
ಎರೆಹುಳ ದಕ್ಕಿಸಿಕೊಂಡಿತು
ಅಥವಾ ಇಲ್ಲ
ಗೊತ್ತಿಲ್ಲ

ಇಡೀ ಭೂಮಿ ಹೊಕ್ಕು ಬಂದಿದೆ
ಎರೆಹುಳದ ಬಾಯಿ
ತೆರೆದರೆ ಬ್ರಹ್ಮಾಂಡ ಕಾಣುವುದು
ಅಥವಾ ಇಲ್ಲ

ಮಣ್ಣು ತಿನ್ನುವ ಜೀವಿಗಳಲ್ಲಿ
ಎರೆಹುಳ ಮಾತ್ರ
ರೈತನ ಮಿತ್ರ


– ದುಡ್ಡನಹಳ್ಳಿ ಮಂಜುನಾಥ್, ತುಮಕೂರು
*****