ಅನುದಿನ‌ ಕವನ-೭೬೪, ಕವಯಿತ್ರಿ: ವಿ ನಿಶಾಗೋಪಿನಾಥ, ಬೆಂಗಳೂರು

ನಿರೀಕ್ಷೆ ಅಂದರೆ
ಸಿಗದಿರುವುದಕ್ಕೆ ಹಾರೈಸುವುದು
ಬೆಂಕಿಯ ಕುಡಿಯ ಮೇಲೆ ಕೂರುವುದು
ಖಾಲಿ ಮೋಡಗಳ ದಿಟ್ಟಿಸುವುದು

ಅದಕ್ಕೆಂದೇ ಈಗ ಅವಳು
ಎಲ್ಲ ನಿರೀಕ್ಷೆಗಳ ತೊರೆದು
ಅಟ್ಟದ ಮೇಲೆ ಗಂಟು ಕಟ್ಟಿಟ್ಟು
ನಿರಮ್ಮಳ ಇರುವಳು

ಪ್ರೀತಿಯ ಕೆಂಡವನು
ಉಡಿಯಲ್ಲಿ ಇಟ್ಟುಕೊಂಡು
ಪ್ರಶಾಂತ ನದಿಯಂತೆ ಹರಿಯುವಳು
ದೂರವಿದ್ದರೂ ಹತ್ತಿರವೇ ಇದ್ದೇವೆ
ಎಂಬ ಸಮಾಧಾನದ ಹೊದಿಕೆ ಹೊದ್ದು
ನಿಟ್ಟುಸಿರು ಬಿಡುವಳು

ಜೊತೆಗೆ ಇರಬೇಕೆಂಬುದು
ಒಂದು ಅನನ್ಯ ಭಾವ
ಜೊತೆಗೆ ಇಲ್ಲದೆಯೂ
ಹೆಜ್ಜೆ ಹಾಕಬಹುದು ಎಂಬುದು
ಮಾತಿಗೆ ಸಿಗದ ಅನುಭಾವ
ಕಂಡುಕೊಂಡಿರುವಳು ಈಗ
ನೆಮ್ಮದಿಯ ಈ ಹೊಸ ಸೂತ್ರವನ್ನು

ಪೂರ್ತಿ ಬದಲಾಗಿದ್ದಾಳೆ
ಅಂತೇನು ಅಲ್ಲ
ಈಗಲೂ ಬಲು ಇಷ್ಟ ಅವಳಿಗೆ
ಕಾಲು ಕೆದರಿ ಜಗಳ ಕಾಯುವುದು
ಕಾಲರ್ ಪಟ್ಟಿ ಹಿಡಿದು ಪ್ರೀತಿಸುವುದು
ಸಂತೋಷದ ಉತ್ತುಂಗವನ್ನು
ಜೊತೆಜೊತೆಗೆ ಮುಟ್ಟುವುದು

-ವಿನಿಶಾಗೋಪಿನಾಥ್, ಬೆಂಗಳೂರು
*****