ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್ ಪಾಸ್ ಸೌಲಭ್ಯ ಕಲ್ಪಿಸಲು ಬಜೆಟ್ ನಲ್ಲಿ‌ ಅನುದಾನ -ಮುಖ್ಯಮಂತ್ರಿ ಬಸವರಾಜ ‌ಬೊಮ್ಮಾಯಿ

ವಿಜಯಪುರ, ಫೆ.4: ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್ ಪಾಸ್ ಸೌಲಭ್ಯ ಕಲ್ಪಿಸಲು ಈ ಬಾರಿಯ ಬಜೆಟ್ ನಲ್ಲಿ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.


ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನಗರದಲ್ಲಿ ಆಯೋಜಿಸಿರುವ 37 ನೇ ಪತ್ರಕರ್ತರ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿವೃತ್ತ ಪತ್ರಕರ್ತರ ಮಾಸಾಶಾಸನದಲ್ಲಿ ಹೆಚ್ಚಳ ಹಾಗೂ ಪತ್ರಕರ್ತರ ಭವನ ಪತ್ರಕರ್ತರಿಂದಲೇ ನಿರ್ವಹಣೆ ಇತ್ಯಾದಿ ಸಂಘದ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ತಿಳಿಸಿದರು.
ಕೃಷ್ಣಾ ನದಿ ನೀರು ಇಡೀ ಬಿಜಾಪುರದ ಕೃಷಿ ಭೂಮಿಗೆ ನೀರಾವರಿ ಒದಗಿಸಿದಾಗ ಈ ಭಾಗ ಇಡೀ ದೇಶದ ಪಾಲಿಗೆ ಅನ್ನದಾತ ಅನಿಸಲಿದೆ. ಈ ನೀರಾವರಿ ಯೋಜನೆಗೆ ಸುದೀರ್ಘ ಹೋರಾಟದ ಹಿನ್ನೆಲೆ ಇದೆ. ಹಲವರ ಸುದೀರ್ಘ ಕನಸಿನ ಫಲ ಎಂದರು.
ನನ್ನನ್ನು ಎಲ್ಲೆಡೆ ನಾಡಿನ ದೊರೆ ಎಂದು ಕರೆಯುವುದರಿಂದ ನನಗೆ ಕಸಿವಿಸಿಯಾಗುತ್ತದೆ. ಇದು ಪ್ರಜಾಪ್ರಭುತ್ವದ ಕಾಲ, ಈಗ ಪ್ರಜೆಯೇ ಪ್ರಭು. ಹೀಗಾಗಿ ನಾಡಿನ ದೊರೆಯನ್ನು ಹುಟ್ಟು ಹಾಕುವುದು ಸಮಂಜಸವಲ್ಲ ಎಂದು‌ ಹೇಳಿದರು.


ಸಮ್ಮೇಳನದ ಸಂಚಿಕೆ ಬಿಡುಗಡೆಮಾಡಿದ ಬೃಹತ್ ನೀರಾವರಿ ಸಚಿವ ಗೋವಿಂದ ಕಾರಜೋಳ, ವಸ್ತು ಪ್ರದರ್ಶನ ಉದ್ಘಾಟಿಸಿದ ಶಾಸಕ‌ ಬಸವಗೌಡ ಯತ್ನಾಳ್, ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರಭಟ್ ಐನಕೈ ಮತ್ತಿತರರು ಮಾತನಾಡಿದರು.
ಕಾರ್ಯ ಕ್ರಮದಲ್ಲಿ ಸಚಿವರಾದ ಮುಗೇಶ ನಿರಾಣಿ, ಸಿ.ಸಿ ಪಾಟೀಲ್, ಸಂಸದ ರಮೇಶ ಜಿಗಜಿಗಣಿ ಜಿಲ್ಲೆಯ ಶಾಸಕರು ಗಣ್ಯರು ಭಾಗವಹಿಸಿದ್ದರು.
ಸಂಘದ ರಾಜ್ಯಾಧ್ಯಕ್ಷ ಶಿವಾನಂದ‌ ತಗಡೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೋಶ, ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಚೂರಿ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್, ಜಿಲ್ಲಾ ಪಂಚಾಯ್ತಿ ಸಿಇಒ ರಾಹುಲ್‌ ಶಿಂಧೆ ಮತ್ತಿತರರು ಉಪಸ್ಥಿತರಿದ್ದರು.
*****