ಅನುದಿನ ಕವನ-೭೬೯, ಕವಿ:ಡಾ.ನಿಂಗಪ್ಪ ಮುದೇನೂರು, ಧಾರವಾಡ, ಕವನದ ಶೀರ್ಷಿಕೆ: ರಮಾಬಾಯಿ ಅಂಬೇಡ್ಕರ್: ‘ಈ ಮಣ್ಣಿನ ಹಣತೆ’

ರಮಾಬಾಯಿ ಅಂಬೇಡ್ಕರ್: ‘ಈ ಮಣ್ಣಿನ ಹಣತೆ’

ನೀನೆ ಶಕ್ತಿ ನೀನೆ ಯುಕ್ತಿ
ಹರಸು ತಾಯೇ ನಮ್ಮ
ಮನದ ಕೊಳೆಯ ತೊಳೆದು ನಿಂತೆ
ರಾಷ್ಟ್ರ ಹಿತಕೆ ಅಮ್ಮ

ತ್ಯಾಗಮಯಿ ಪ್ರೇಮಮಯಿ
ರಮಾಬಾಯಿ ತಾಯೇ
ಸಂವಿಧಾನ ಬಾಳಧ್ಯಾನ
ಕಾಪಿಟ್ಟೆ ತಾಯೇ

ಓದು ಅರಿವು ಜಲದ ತಿಳಿವು
ಸಮಭಲದ ಭೀಮ
ನಿಂತ ನೆಲವು ಹಸಿರಾಯಿತು
ನಿನ್ನಿಂದಲೇ ರಮಾ…

ಮೌನದಿಂದ ಗೆದ್ದೆ ತಾಯೇ
ಸೂರ್ಯನಾಲ ಪ್ರೀತಿ
ಅಂಬೇಡ್ಕರ ಒಂದೇ ಎಂಬ
ಜೀವಯಾನ ಪ್ರೀತಿ

ನೊಂದೆ ತಾಯಿ ಬಡವರಿಗೆ
ಬೆಂದೆ ತಾಯಿ ಧನಿಕರಿಗೆ
ಗುಡಿಸಲಿಗು ಬೆಳಕನಿಟ್ಟು
ಹಾಲುಣಿಸಿದೆ ತಾಯೇ

ಚಂದ್ರಮತಿಯ ದುಃಖದಲ್ಲೂ
ಕನಸುಣಿಯಾದೆ ನೀನು
ಒಡವೆ ವಸ್ತ್ರಕ್ಕಿಂತ ಮಿಗಿಲು
ಅಕ್ಷರವೆಂದ ಮುಗುಳು

ಲಾವಾರಸ ಪರ್ವತವನೆ
ಮಂಜುಗಡ್ಡೆಯಾಗಿಸಿ
ಕರುಳಿಂದ ಕರಗಿಸಿ
ಮಹಾಡ್ ಪ್ರೀತಿಯುಣಿಸಿ

ರತ್ನದಂತಹ ಮಗಮಡಿದರೂ
ಗಿರಿಶಿಖರದ ಮನವೇ
ಅಂಬೇಡ್ಕರರಿಗು ಜೀವತೇಯ್ದ
ಶ್ರೀಗಂಧದ ಕೊರಡೇ

ಅನ್ನ ನೀರು ಗಾಳಿಗಂಧ
ಲೋಕಪ್ರೀತಿ ಉಣಿಸಿ
ಬಡಜನತೆಗೆ ಉಸಿರಾದೆ
ಈ ಮಣ್ಣಿನ ಹಣತೆ


-ಡಾ.ನಿಂಗಪ್ಪ ಮುದೇನೂರು, ಧಾರವಾಡ
*****