ಅನುದಿನ ಕವನ-೭೭೨, ಕವಿ: ವಿಲ್ಸನ್ ಕಟೀಲ್, ಮಂಗಳೂರು, ಕವನದ ಶೀರ್ಷಿಕೆ: ಸಂತೆ

ಸಂತೆ

ಮಗು ಈಗಾಗಲೇ
ಗೊಂಬೆಯನ್ನು ಎದೆಗಪ್ಪಿ
ಒಂದೆರಡು ಮುತ್ತುಗಳನ್ನೂ
ಕೊಟ್ಟಾಗಿದೆ…

ದೊಡ್ಡವರ
ಚಿಲ್ಲರೆ ಚೌಕಾಸಿಯಿನ್ನೂ ಮುಗಿದಿಲ್ಲ!
ಜೋಡಿಸಿಟ್ಟ ಬಟ್ಟೆಗಳು
ಹುಡುಕುತ್ತಿವೆ-

ತಂತಮ್ಮ ಬಣ್ಣ,
ಅಳತೆ,
ಶ್ರೀಮಂತಿಕೆಗೆ
ತಕ್ಕ ದೇಹಗಳನ್ನು!

ಹೊಸ ಚಪ್ಪಲಿಗಳು
ವಿಪರೀತ ಚುಚ್ಚುತ್ತಿವೆ…

ಬಡ ವ್ಯಾಪಾರಿ
ತಲೆಮೇಲೆ ಹೊತ್ತು
ಊರೂರು ಸುತ್ತಿದ ಅವುಗಳಿಗೆ
ಕೆಲಕಾಲ ಹಿಡಿಯುತ್ತೆ…
ಗಿರಾಕಿಯ ಪಾದಗಳಿಗೆ ಹೊಂದಿಕೊಳ್ಳಲು!

ಹರಡಿಕೊಂಡಿವೆ ಪಾತ್ರೆಗಳು…
ಕೆಲವರಿಗಂತೂ
ಅವಳ ಬುತ್ತಿಯ ಮೇಲೆಯೇ ಕಣ್ಣು!

ಯಾರದೋ ಕೈರೇಖೆಗಳಲ್ಲಿ
ತಮ್ಮ ಬದುಕು ಹುಡುಕುತ್ತಿದ್ದಾರೆ
ಭವಿಷ್ಯ ಹೇಳುವವರು!

ಹುರಿದ ಕಡಲೆ ಕಟ್ಟಿದ ಪತ್ರದಲ್ಲಿ
ಮತ್ತೆ ಬೆಚ್ಚಗಾಗಿವೆ
ಹಳೆಯ ಸುದ್ದಿಗಳು!

ಕೈಚಾಚಿದ್ದಾನೆ ಭಿಕ್ಷುಕ…                                  ಎದೆತೆರೆದು ಬಿದ್ದುಕೊಂಡಿವೆ                                  ಮಾರಿ ಹೋಗದ                                                ಖಾಲಿ ಪರ್ಸುಗಳು!

-ವಿಲ್ಸನ್ ಕಟೀಲ್, ಮಂಗಳೂರು
*****