ಅನುದಿನ ಕವನ-೭೭೩, ಕವಿ:ಮಹೇಂದ್ರ ಕುರ್ಡಿ, ಹಟ್ಟಿ ಚಿನ್ನದ ಗಣಿ, ಕವನದ ಶೀರ್ಷಿಕೆ: ಪ್ರೀತಿ ತೆನೆ

ಪ್ರೀತಿ ತೆನೆ

ಬಿಳಿ ಜ್ವಾಳದ ಹೊಲ್ದಾಗ
ಜೋಡಿ ಹಕ್ಕಿ ಹಾಂಗ
ಮುಕ್ಕುತ ಹಾಲ್ತೆನೆ ಕಾಳ
ಪ್ರೀತಿ ಸವಿ ಜೇನು ಹೀರೋಣು
ಮುತ್ತಿನ ತೆನೆಯ ಹೊತ್ತು ಬಾರೆ.

ಆಳೆತ್ತರ ಬೆಳೆಯ್ಯಾಗ ನಿಂತ
ಅಟ್ಟದ ಮ್ಯಾಲೆ ಕುಂತ
ಬೆಳದಿಂಗಳ ಬೆಳಕಲ್ಲಿ ಆಡೋಣು
ಅಲ್ಲೇ ಮನದ ಮಾತ
ಬೆಚ್ಚನೆ ಕಂಬಳಿ ಹೊದ್ದು ಬಾರೆ.

ಜ್ವಾಳದ ರೊಟ್ಟಿ ತಿಂದ
ಗಟ್ಟಿ ಜನುಮವು ನಂದ
ಜೀವ ಇರೋ ತನಕ
ಜತನ ಮಾಡುವೆ ಜ್ವಾಕೀಲೆ
ನನ್ನಲ್ಲೊಮ್ಮೆ ನೀ ಬಂದು ಸೇರೆ.

ಮುದ್ದು ಮೋರೆ ಚೆಲುವೆ
ಮತ್ತೆಲ್ಲಿಗೆ ನೀ ಓಡುವೆ
ನೀ ಮರೆಯದ ಹಾಗೊಂದು
ಸಿಹಿ ಮುತ್ತ ನೀಡುವೆ
ಮಧು ತುಂಬಿದ ತುಟಿಯ ತಾರೆ.

ಜೀವದ ಜೀವ ನೀ ಗೆಳತಿ
ಜನುಮದ ಜೋಡಿಯ ಒಡತಿ
ಭೂಮಿ ತಾಗದ ಹಾಂಗೆ
ಹೆಗಲ ಮ್ಯಾಲೆ ಹೊತ್ತು ತಿರುಗುವೆ
ಜೀಕೋಣು ಜೀವನ ಉಯ್ಯಾಲೆ.


-✍🏻 ಮಹೇಂದ್ರ ಕುರ್ಡಿ, ಹಟ್ಟಿ ಚಿನ್ನದ ಗಣಿ
*****