ಬಳ್ಳಾರಿ: ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಹಾಗೂ ರೇಬಿಸ್ ಲಸಿಕೆ ಹಾಕುವ ಯೋಜನೆ ರೂಪಿಸಬೇಕು -ಪಾಲಿಕೆಗೆ ನಿಖಿತಾ ಅಯ್ಯರ್ ಒತ್ತಾಯ

ಬಳ್ಳಾರಿ, ಫೆ.15: ನಗರದಲ್ಲಿ ಸುಮಾರು 30ಸಾವಿರ ಬೀದಿ ನಾಯಿಗಳಿದ್ದು, ಇವುಗಳಿಗೆ ಸಂತಾನ ಹರಣ ಚಿಕಿತ್ಸೆ ಹಾಗೂ ರೇಬಿಸ್ ಲಸಿಕೆ ಹಾಕುವ ಯೋಜನೆಯನ್ನು ಮಹಾನಗರ ಪಾಲಿಕೆ ಕೈಗೊಳ್ಳಬೇಕು ಎಂದು ಹ್ಯೂಮನ್ ವರ್ಲ್ಡ್ ಫಾರ್ ಅನಿಮಲ್ಸ್ ಸ್ಥಳೀಯ ಸಂಘಟನೆಯ ಮುಖ್ಯಸ್ಥೆ ನಿಖಿತಾ ಅಯ್ಯರ್ ಅವರು ಒತ್ತಾಯಿಸಿದರು.


ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
೨೦೧೫ ರಿಂದ ಅನಿಮಲ್ ಬರ‍್ತ್ ಕಂಟ್ರೋಲ್ ಮತ್ತು ಆಂಟಿ ರೇಬೀಸ್ ವ್ಯಾಕ್ಸಿನೇಷನ್ ಅನ್ನು ದೊಡ್ಡ ಪ್ರಮಾಣದಲ್ಲಿ
ನಡೆಸುವಂತೆ ನಾವು ಪಾಲಿಕೆಗೆ ವಿನಂತಿಸುತ್ತಾ ಬಂದಿದ್ದೇವೆ. ಹಲವು ಬಾರಿ ಟೆಂಡರ್ ಕರೆದ ನಂತರವೂ ಬಿಲ್ ಪಾವತಿ ಸಮಸ್ಯೆಗಳಿಂದಾಗಿ ಒಂದೇ ಒಂದು ಸಂಸ್ಥೆ
ಯೋಜನೆಗೆ ಕೈಜೋಡಿಸುತ್ತಿಲ್ಲ ಎಂದು ದೂರಿದರು.
ತಮ್ಮ ಸಂಸ್ಥೆ ಸಾರ್ವಜನಿಕ ದೇಣಿಗೆಯಿಂದ ೩೦೦೦ ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಹಾಗೂ ರೇಬಿಸ್ ಲಸಿಕೆ ಹಾಕಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಬೀದಿ ನಾಯಿಗಳಿಗೆ ಆಹಾರ ನೀಡದಂತೆ ಪಾಲಿಕೆ ಘೋಷಿಸಿರುವುದು ಸಾರ್ವಜನಿಕರಲ್ಲಿ ಭಯ ಮೂಡಿಸಿದೆ. ಇಂತಹ ಕ್ರಮಗಳು ನಾಯಿಗಳನ್ನು ಹೆಚ್ಚು ಆಕ್ರಮಣಕಾರಿಗಳನ್ನಾಗಿ ಮಾಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಹಾ ನಗರ ಪಾಲಿಕೆ ಬೀದಿ ನಾಯಿಗಳಿಗೆ ಲಸಿಕೆ ಹಾಗೂ ಸಂತಾನ ಹರಣ ಶಸ್ತ್ರಚಿಕಿತ್ಸೆಗಾಗಿ ಸಮಗ್ರ ಯೋಜನೆಯೊಂದನ್ನು ಶೀಘ್ರ ರೂಪಿಸಬೇಕು ಎಂದು ಅಯ್ಯರ್ ಒತ್ತಾಯಿಸಿದರು.
ಸುದ್ದಿ ಗೋಷ್ಟಿಯಲ್ಲಿ ಸಂಘಟನೆಯ ಆಕಾಶ್ ಕುಮಾರ್ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.
*****