ಹಲಕುಂದಿ ಬಳಿ ರಸ್ತೆ ಅಪಘಾತ: ಚಿಕಿತ್ಸೆ ಫಲಕಾರಿಯಾಗದೇ ಹಿರಿಯ ಶಿಕ್ಷಕಿ ಪುಷ್ಪಾವತಿ ವಿಧಿವಶ

ಬಳ್ಳಾರಿ, ಫೆ.16: ತಾಲೂಕಿನ ಹಲಕುಂದಿ ಗ್ರಾಮದ ವಿಬಿಎಸ್ ಮಠದ ಬಳಿ ಫೆ. 13ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಗ್ರಾಮದ ಸಹಿಪ್ರಾ ಶಾಲೆಯ ಹಿರಿಯ ಶಿಕ್ಷಕಿ ಪುಷ್ಪಾವತಿ(59) ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ನಸುಕಿನ ಜಾವ ನಿಧನರಾದರು.


ನಗರದ ಟಿಬಿ ಸ್ಯಾನಿಟೋರಿಯಂ ಬಳಿ ಇರುವ ವಿಮ್ಸ್ ಟ್ರಾಮಾಕೇರ್ ಸೆಂಟರ್‌ ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಪುಷ್ಪಾವತಿ ಅವರು ಇಬ್ಬರು ಪುತ್ರರು, ಸೊಸೆ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಕಳೆದ 26 ವರ್ಷಗಳಿಂದ ಹಲಕುಂದಿ ಸಹಿಪ್ರಾ ಶಾಲೆಯಲ್ಲಿ ಅಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪುಷ್ಪಾವತಿ ಇದೇ ಮೇ ತಿಂಗಳಲ್ಲಿ ವಯೋ ನಿವೃತ್ತಿ ಹೊಂದುತ್ತಿದ್ದರು. ವಿದ್ಯಾರ್ಥಿ ಮೆಚ್ಚಿನ ಶಿಕ್ಷಕಿಯಾಗಿದ್ದ ಇವರ ನಿಧನದಿಂದ ಗ್ರಾಮವೇ ಶೋಕತಪ್ತವಾಗಿದೆ. ಮೃತರ ಗೌರವಾರ್ಥ ಶ್ರದ್ಧಾಂಜಲಿ ಅರ್ಪಿಸಿ ಶಾಲೆಗೆ ಒಂದು ದಿನ ರಜೆ ಘೋಷಿಸಲಾಗಿದೆ.
ನಿನ್ನೆ ಸಂಜೆ ಪೂರ್ವ ವಲಯದ ಬಿಇಓ ಕೆಂಪಯ್ಯ ಅವರು ಆಸ್ಪತ್ರೆಗೆ ಭೇಟಿ ಪುಷ್ಪಾವತಿ ಸೇರಿದಂತೆ ಇತರೆ ಗಾಯಾಳು ಶಿಕ್ಷಕರ ಆರೋಗ್ಯ ವಿಚಾರಿಸಿದ್ದರು. ಪ್ರಾಥಮಿಕ ಸರಕಾರಿ ಶಿಕ್ಷಕರ ಸಂಘದ ಜಿಲ್ಲಾ ಹಾಗೂ ತಾಲೂಕು ಘಟಕಗಳ ಮುಖಂಡರು, ಪದಾಧಿಕಾರಿಗಳು, ಗ್ರಾಮದ ಹಿರಿಯರು, ಶಿಕ್ಷಕರು ಆಸ್ಪತ್ರೆಗೆ ಭೇಟಿ‌ನೀಡಿ ಶೀಘ್ರ ಗುಣಮುಖರಾಗಲು ಪ್ರಾರ್ಥಿಸುತ್ತಿದ್ದರು.
ಕಂಬನಿ: ಅಧ್ಯಾಪಕಿ ಪುಷ್ಪಾವತಿ ಅವರ ಅಕಾಲಿಕ ನಿಧನಕ್ಕೆ ಬಿಇಓ ಕೆಂಪಯ್ಯ, ಇಸಿಓಗಳಾದ ಗೂಳಪ್ಪ, ಹಿರೇಮಠ, ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ನಿಂಗಪ್ಪ, ಬಳ್ಳಾರಿ ತಾಲೂಕು ಘಟಕದ ಅಧ್ಯಕ್ಷ ರಮೇಶ್ ಸೇರಿದಂತೆ ಪದಾಧಿಕಾರಿಗಳು, ಬಳ್ಳಾರಿ ತಾಲೂಕು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಂಪನಗೌಡ, ಪದಾಧಿಕಾರಿಗಳು, ಗುಲ್ಬರ್ಗಾ ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ ಸಿ.ಮಂಜುನಾಥ್ ಕಂಬನಿ ಮಿಡಿದಿದ್ದಾರೆ.
*****