ಅನುದಿನ ಕವನ-೭೮೭, ಕವಿ:ಮಧುಸೂದನ ಬೆಳಗುಲಿ, ಮಡಿಕೇರಿ, ಕವನದ ಶೀರ್ಷಿಕೆ:ಅವನೊಂದಿಗೆ ‘ಒಂದು ಸೆಲ್ಫಿ’

ಅವನೊಂದಿಗೆ ‘ಒಂದು ಸೆಲ್ಫಿ’

ಅಪರೂಪಕ್ಕೆ ಸಿಕ್ಕ ಬಾಲ್ಯದ ಗೆಳೆಯನೊಂದಿಗೆ
ಸಾವಿರ ನೆನಪುಗಳ ಕುರಿತ ಹರಟೆ
ಹೊಡೆದದ್ದೇ ಹೊಡೆದದ್ದು.
ನದಿಯಲ್ಲಿ ಈಸು ಬಿದ್ದದ್ದು,
ಮಾಸ್ತರು ಹೂಸು ಬಿಟ್ಟದ್ದು,
ಮನೆಯಲ್ಲಿ ಕಾಸು ಕದ್ದದ್ದು
ಹೀಗೆ ಬಾಲಕರಾಗಿ ಮೆರೆದಿದ್ದೆವು..

ಪಾಪ ಈಗಾಗಲೇ ಮದುವೆ,
ಮಕ್ಕಳು ಅಂತ ಹೈರಾಣಾಗಿದ್ದ ಹೈದ,
ಬಹುದಿನದ ಮೇಲೆ
ಇಷ್ಟೊಂದು ನಕ್ಕಿದ್ದ.

ಇಂದಿಗೂ ಕುಂಡಿ ಹರಿದ ಚೆಡ್ಡಿಯ
ಅಮಾಯಕತೆ ಮಾಸದಂತೆ
ನೆನಪು ಮರೆಯದಂತೆ ಪೆಚ್ಚುಮೋರೆಯ
ಟ್ರೇಡ್ ಮಾಕ್೯ ಉಳಿಸಿಕೊಂಡಿದ್ದಾನೆ

ಹಳೆಯ ಲೊಟಾರಿ ಮೊಪೆಡ್ಡು
ಬೇಸಿಕ್ ಮಾಡೆಲ್ಲಿನ ಮೊಬೈಲಿನೊಂದಿಗೆ ಜೀವನ ಸರಳ, ಸುಂದರ
ಸಿಕ್ಕ ದಡ ತಲುಪಿದ ಖುಷಿಯಲ್ಲಿ
ನೆಲೆ ಮಾಡಿಕೊಂಡಿದ್ದಾನೆ

ಈಗಲೂ,
ಬೇಡದ ಹುಡುಗಿಯೊಂದಿಗೆ
ಮದುವೆಯಾದ ಗಂಡಸಿನಂತೆ
ಒಮ್ಮೊಮ್ಮೆ ಪೆಚ್ಚು ಪೆಚ್ಚು
ಹಲಬಾರಿ ಹುಸಿಮುನಿಸು.

ನನ್ನ ಹೈ ಪಿಕ್ಸೆಲ್ಲಿನ ಕ್ಯಾಮೆರಾದಲ್ಲಿ
ಅದೇ ಪೆಚ್ಚುಮುಖದೊಂದಿಗೆ
ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದೇನೆ
ಆ ಫೋಟೋದಲ್ಲಿ ಅವನ ಸಾದಾ ನಗು
ಮಗುವಿನಂತೆ ಅರಳಿ ಕುಳಿತಿದೆ
ನೆನಪು ಮಾಸದಂತೆ..


-ಮಧುಸೂದನ್ ಬೆಳಗುಲಿ, ಮಡಿಕೇರಿ
****”