ಜಿಲ್ಲಾ ೨೨ನೇ ಕನ್ನಡ ಸಾಹಿತ್ಯ ಸಮ್ಮೇಳನ: ಹೇರಳ ಗಣಿ ಸಂಪತ್ತಿನ ಅಖಂಡ ಬಳ್ಳಾರಿ ಜಿಲ್ಲೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದೆೆ -ಡಾ. ಅರವಿಂದ ಪಾಟೀಲ್ ವಿಷಾಧ

ಬಳ್ಳಾರಿ, ಮಾ.೧: ಆರ್ಥಿಕವಾಗಿ ಹೇರಳ ಗಣಿ ಸಂಪತ್ತನ್ನು ಹೊಂದಿರುವ ಅಖಂಡ ಬಳ್ಳಾರಿ ಜಿಲ್ಲೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದುಳಿದಿದೆ ಎಂದು ಜಿಲ್ಲಾ ೨೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಅರವಿಂದ ಪಾಟೀಲ ಅವರು ವಿಷಾಧಿಸಿದರು.
ನಗರದ ರಾಘವ ಕಲಾ ಮಂದಿರದಲ್ಲಿ ಬುಧವಾರ ಆರಂಭಗೊಂಡ ಎರಡು ದಿನಗಳ ಅಖಂಡ ಬಳ್ಳಾರಿ ಜಿಲ್ಲಾ  ೨೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಹಿತ್ಯ, ಸಾಂಸ್ಕೃತಿಕ, ಐತಿಹಾಸಿಕ, ಜನಪದೀಯ, ದಾಸ, ಸೂಫಿ ಮತ್ತು ಅವಧೂತ ಪರಂಪರೆಯ ಸಮೃದ್ಧತೆಯ ಅಖಂಡ ಬಳ್ಳಾರಿ ಜಿಲ್ಲೆ ಪ್ರಾಕೃತಿಕ ಸಂಪತ್ತನ್ನು ಹೊಂದಿದ್ದರೂ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಈ ಭಾಗ ಈಗಲೂ ಹಿಂದುಳಿದಿರುವುದ್ದಕ್ಕೆ ಪ್ರತಿಯೊಬ್ಬರೂ ಎಚ್ಚರಗೊಳ್ಳಬೇಕು ಹಾಗೂ ಎಚ್ಚೆತ್ತುಕೊಂಡು ವ್ಯವಹರಿಸುವ ಅಗತ್ಯತೆಯನ್ನು ಪ್ರತಿಪಾದಿಸಿದರು.
ಕನ್ನಡ ಭಾಷೆ, ಸಂಸ್ಕೃತಿ ಅನ್ನದೊಂದಿಗೆ ತಳಕು ಹಾಕಿಕೊಂಡಿರುವ ಹಿನ್ನಲೆಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗಬೇಕು ಎಂದು ಒತ್ತಾಯಿಸಿದರು.


ರಾಜಕೀಯ ಇಚ್ಛಾಶಕ್ತಿ ಇರದಿರುವುದರಿಂದ ಉತ್ತಮ ಕನ್ನಡ ಶಾಲೆಗಳು, ಕನ್ನಡ ಶಿಕ್ಷಕರ ಕೊರತೆ ಕಾಡುತ್ತಿದೆ ಎಂದು ಡಾ. ಪಾಟೀಲ್ ಟೀಕಿಸಿದರು.
ಗಡಿನಾಡು ಕನ್ನಡ ಶಾಲೆಗಳ ಕುಂದುಕೊರತೆಗಳನ್ನು ಆದ್ಯತೆಯ ಮೇರೆಗೆ ಸ್ಪಂದಿಸ ಬೇಕು ಎಂದರು.
ರಾಜ್ಯದಲ್ಲಿ ಕನ್ನಡ ಮಾಧ್ಯಮ ಭಾಷೆಯಾಗಿಸಲು ಸರಕಾರಗಳು ಅಗತ್ಯ ಬಿದ್ದರೆ ಸಂವಿಧಾನ ತಿದ್ದಪಡಿಗೂ ಮುಂದಾಗಬೇಕು. ಫ. ಗು. ಹಳಿಕಟ್ಟಿ ಅವರ ಆಶಯದಂತೆ ಯೋಗ್ಯ ಶಿಕ್ಷಣ ಕ್ರಮ ಇಂದಿನ ಅಗತ್ಯ ಎಂದು ಹೇಳಿದರು.
ನಾಡು ನುಡಿಗೆ ಶ್ರಮಿಸಿದವರ ಹೆಸರುಗಳನ್ನು ಉದ್ಯಾನವನ, ಪ್ರಮುಖ ರಸ್ತೆಗಳಿಗೆ ನಾಮಕರಣ ಮಾಡಬೇಕು. ಕಲಾ ಪ್ರಾವೀಣ್ಯರಿಗೆ ಸರಕಾರದ ಸ್ಥಾನಮಾನಗಳು ಲಭಿಸಬೇಕು. ರಂಗಭೂಮಿ ಇತರೆ ಪ್ರಕಾರಗಳ ಕಲಾವಿದರಿಗೆ ಮಾಸಾಶನ ಸೇರಿದಂತೆ ಅಗತ್ಯ ಸರಕಾರಿ ಸೌಲಭ್ಯಗಳು ನಿರಂತರವಾಗಿ ದೊರೆಯಬೇಕು ಎಂದರು.
ಕನ್ನಡ ಸಾಹಿತ್ಯಕ್ಕೆ ವೈದ್ಯಲೋಕದ ಕೊಡುಗೆ ಅಪಾರ. ಈ ಹಿನ್ನಲೆಯಲ್ಲಿ ಮಾನಸಿಕ ತಜ್ಞರಾದ ಡಾ. ಸಿ ಆರ್ ಚಂದ್ರಶೇಖರ, ಡಾ. ಆರ್.ಶ್ರೀಧರ್, ಡಾ. ನಾ. ಸೋಮೇಶ್ವರ, ಡಾ. ಗಿರಿಜಮ್ಮ, ಡಾ. ಪವಿತ್ರ, ಡಾ.ಶುಭ್ರತಾ, ಡಾ. ಕರವೀರಪ್ರಭು ಕ್ಯಾಲಕೊಂಡಮ ಡಾ. ಎಚ್ ಎಸ್ ಅನುಪಮ, ಡಾ. ಎಸ್. ಬಿ ಲಕ್ಕೋಳ, ಡಾ.ಶಿವಾನಂದ ಕುಬುಸದ ಸೇರಿದಂತೆ ಹಲವು ವೈದ್ಯರು ಸಾಹಿತ್ಯ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.

ದೇಶದ ಸ್ವಾತಂತ್ರ್ಯ ಮತ್ತು ಕರ್ನಾಟಕ ಏಕೀಕರಣಕ್ಕೆ ಅವಿಭಜಿತ ಬಳ್ಳಾರಿ ಜಿಲ್ಲೆಯ ಹೋರಾಟಗಾರರ ತ್ಯಾಗ, ಬಲಿದಾನ ನೆನಪಿಸಿದ ಡಾ. ಪಾಟೀಲರು, ನಗರದವರೇ ಆದ ಪೈಲ್ವಾನ್ ರಂಜಾನ್ ಸಾಬ್ ಅವರು ಕನ್ನಡ ಹಾಗೂ ನಾಡಿಗಾಗಿ ತಮ್ಮ ಪ್ರಾಣವನ್ನೇ ನೀಡಿದರು ಎಂದು ಹೇಳಿದರು.
ಬಳ್ಳಾರಿ ಜಿಲ್ಲೆಯಲ್ಲಿ ನವ ಶಿಲಾಯುಗದ ಸಂಸ್ಕೃತಿಯ ಅವಶೇಷಗಳು ಸಂಗನಕಲ್ಲು, ತೆಕ್ಕಲಕೋಟೆ, ಕಪ್ಪಗಲ್ಲು ಗ್ರಾಮದಲ್ಲಿ ಕಾಣಸಿಗುತ್ತವೆ. ಅಶೋಕನ ಶಾಸನ ಜಿಲ್ಲೆಯ ನಿಟ್ಟೂರಿನಲ್ಲಿ ಹಾಗೂ ಹತ್ತಿರದ ಅಶೋಕ ಸಿದ್ಧಾಪುರದಲ್ಲಿ ಇವೆ. ಶಾತವಾಹನರ ಮೂಲ ಪುರುಷ ಸಿಮುಖ ಬಳ್ಳಾರಿ ಜಿಲ್ಲೆಗೆ ಸೇರಿದವನೆಂದು ವಿದ್ವಾಂಸರು ಪ್ರತಿಪಾದಿಸಿದ್ದಾರೆ ಎಂದು ತಿಳಿಸಿದರು.
ಸಮ್ಮೇಳನವನ್ನು ಶ್ರೀ ಕೊಟ್ಟೂರು ಸ್ವಾಮಿ ಸಂಸ್ಥಾನಮಠದ ಶ್ರೀ ಕೊಟ್ಟೂರು ಬಸವಲಿಂಗ ಸ್ವಾಮಿಗಳು ಉದ್ಘಾಟಿಸಿ ಮಾತನಾಡಿದರು.
ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಫಾದರ್ ಐವಾನ್ ಪಿಂಟೋ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ, ಹಿರಿಯ ಸಾಹಿತಿ ಡಾ. ಜೆ ಎಂ ನಾಗಯ್ಯ ಮತ್ತಿತರ ಗಣ್ಯರು ಭಾಗವಹಿಸಿದ್ದರು.
ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಬಸವರಾಜ ಗದಗಿನ ನಿರ್ವಹಿಸಿದರು. ಡಾ. ಕೆ ಶಿವಲಿಂಗಪ್ಪ ಹಂದ್ಯಾಳ್ ಸ್ವಾಗತಿಸಿದರು. ಡಾ. ಪರಮೇಶ್ವರಯ್ಯ ಸೊಪ್ಪಿಮಠ ನಿರೂಪಿಸಿದರು. ಬಸವರಾಜ ಬಿಸಲಹಳ್ಳಿ ವಂದಿಸಿದರು. ಜಡೇಶ ಎಮ್ಮಿಗನೂರು ಮತ್ತು ತಂಡದವರು ನಾಡ ಗೀತೆ ಮತ್ತು ರೈತಗೀತೆ ಪ್ರಸ್ತುತ ಪಡಿಸಿದರು.


ಮೆರವಣಿಗೆ: ಸಮ್ಮೇಳನದ ಅಂಗವಾಗಿ ತಾಯಿ ಭುವನೇಶ್ವರಿಯ ಭಾವಚಿತ್ರದೊಂದಿಗೆ ಸಮ್ಮೇಳನಾಧ್ಯಕ್ಷ ಡಾ. ಅರವಿಂದ ಪಾಟೀಲ ದಂಪತಿ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು.
ಶಾಸಕ ಜಿ. ಸೋಮಶೇಖರ ರೆಡ್ಡಿ ಅವರು ಡೊಳ್ಳು ಬಾರಿಸಿ ಗಮನ ಸೆಳೆದರು.  ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ರಾಜೇಶ್ವರಿ ಸುಬ್ಬರಾಯುಡು ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದ್ದವು.
ಬಳಿಕ ದಿನವೀಡಿ ವಿವಿಧ ಗೋಷ್ಠಿಗಳು, ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
*****