ಅನುದಿನ ಕವನ-೭೯೧, ಕವಿಯಿತ್ರಿ: ವಿ ನಿಶಾಗೋಪಿನಾಥ್, ಬೆಂಗಳೂರು

ಹಸಿದವರು ಎಚ್ಚರವಾಗಿಯೇ ಇರುವರು
ಹಸಿವು ಅವರನ್ನು ತಿವಿದು ಎಬ್ಬಿಸುತ್ತಿರುತ್ತದೆ
ನಿದ್ರೆಗೆ ಜಾರಲು ಬಿಡದೆ
ಅವರದು ಹಸಿವಿನ ಜೊತೆಗೆ ಸತತ ಯುದ್ಧ

ಶ್ರೀಮಂತಿಕೆ ತೂಗುವ ತೊಟ್ಟಿಲು
ಹಸಿವು ಅವರನು ಬೆಚ್ಚಿ ಬೀಳಿಸುವುದಿಲ್ಲ
ನಿದ್ದೆ ಕೆಡಿಸುವುದಿಲ್ಲ
ರಣರಂಗದಲೂ ನಿದ್ದೆ ಮಾಡಬಲ್ಲರು
ಯುದ್ಧ ಅವರ ವ್ಯಾಪಾರ

ಹಸಿದವನಿಗೂ ಹೊಟ್ಟೆ ತುಂಬಿದವನಿಗೂ
ವ್ಯತ್ಯಾಸವನ್ನೇ ಗುರುತಿಸದ ಕಾಲ ಇದು
ಯೋಚಿಸುವ ಗುಣವೇ ಇಲ್ಲ
ಗೆದ್ದವನಿಗೆ ಮಾತ್ರ ಬದುಕುವ ಹಕ್ಕು ಇರುವ ಕಾಲ

ಆದುದರಿಂದಲೇ
ಅರಿತವರು ಮೌನಕ್ಕೆ ಶರಣಾಗತ್ತಿರುವರು
ನಟನೆಯ ಪಾಠಗಳನ್ನು ದಿನವೂ ಕಲಿಯುತ್ತಿರುವರು
ಏಕೆಂದರೆ ಅವರು ಯುದ್ಧದ ಭಾಗಿಗಳಲ್ಲ
ಯಾವ ಕಡೆ ನಿಂತರೆ ಒಳ್ಳೆಯದು ಎಂದು
ಸದಾ ಯೋಚಿಸುತ್ತಿರುವವರು
ಅವರ ನಿದ್ದೆಗೆ ಯಾವ ಕಂಟಕವೂ ಇಲ್ಲ


-ವಿ ನಿಶಾ ಗೋಪಿನಾಥ್,ಬೆಂಗಳೂರು

(ಚಿತ್ರ ಕೃಪೆ: ಡಿ ಎಸ್ ಚೌಗಲೆ)

*****