ಅನುದಿನ ಕವನ: ೭೯೫, ಕವಿ: ಡಾ. ಬಿ ಆರ್. ಕೃಷ್ಣಕುಮಾರ್, ಚಾಮರಾಜ ನಗರ, ಕವನದ ಶೀರ್ಷಿಕೆ: ಕಾವ್ಯಂ ನಿಚ್ಚಂ ಪೊಸತು

ಕಾವ್ಯಂ ನಿಚ್ಚಂ ಪೊಸತು

ಏಲ್ಲಿಂದ ಬಂದಿರಿ
ಯಾಕೆ ಎದೆಯೊಳಗೆ ಕುಂತಿರಿ
ಪ್ರಕಟಿಸಲಾಗದ ಕವಿತೆಗಳೇ…

ತುಂತುರು ಮಳೆಯೋಪಾದಿ
ಪುಟ್ಟಪುಟ್ಟ ಹೆಜ್ಜೆ ಇಟ್ಟು
ಹೃದಯದಲ್ಲಿ ಬಂದಿಳಿದಿರಿ
ಏಲ್ಲಿಂದ ಬಂದಿರಿ
ಯಾಕೆ ಎದೆಯೊಳಗೆ ಕುಂತಿರಿ
ಪಠ್ಯದಿಂದ ಹೊರಗುಳಿದ ಕವಿತೆಗಳೇ…

ಪದವ ನುಡಿವ
ನಾಲಿಗೆ ಸೀಳುತ್ತಾರೆ ಇಲ್ಲಿ
ಶಾಲಾ ಬಾಲಕ ನೀರು ಕುಡಿದು
ಏಟು ತಿಂದು ಸತ್ತಂತೆ.

ಬರೆವ ಕೈ ಬೆರಳುಗಳ ತುಂಡರಿಸುತ್ತಾರೆ ಇಲ್ಲಿ
ಹರಿಹೈದ ವಾಚು ಕಟ್ಟಿಕೊಂಡ ಕಾರಣ
ಗುಜ್ಜೆಕೋಲು ಮುಟ್ಟಿ ಏಟು ತಿಂದಂತೆ.

ನಿಂತ ಕಾಲುಗಳನ್ನು
ಕತ್ತರಿಸುತ್ತಾರೆ ಇಲ್ಲಿ
ಮದಮಗ ಕುದುರೆ ಅತ್ತಿದಕ್ಕೆ
ಪ್ರಾಣ ಕಳೆದುಕೊಂಡಂತೆ

ಏಲ್ಲಿಂದ ಬಂದಿರಿ
ಯಾಕೆ ಎದೆಯೊಳಗೆ ಕುಂತಿರಿ
ಪ್ರಶಸ್ತಿ ವಂಚಿತ ಕವಿತೆಗಳೇ…

ಬರೆದು ಹರಿದು ಬಿಸಾಕಿದ
ಕಸದ ಬುಟ್ಟಿಯಲ್ಲಿ ಇಣುಕಿ ಅಣಕಿಸುವ
ಕಪ್ಪು ಕವಿತೆಗಳೇ.
ನಿಮಗೆ ಬಣ್ಣ ಬಳಿಯುವ
ಬಣ್ಣವಿಲ್ಲ ನನ್ನ ಬಳಿ
ಬಂಧಿಸುವ ಭೀತಿ
ಮುಟ್ಟುಗೋಲಿನ ಶಂಕೆಯಿಲ್ಲ
ಕೈಯಲ್ಲಿ ಸಂವಿಧಾನ
ದಾರಿ ತೋರ್ವ ಕೈಬೆರಳು ಜೊತೆಗಿರುವಾಗ.

ನಾಲಿಗೆ ಸೀಳಿ
ಬಾಯಿ ಹೊಲಿದು
ಕೈಕಾಲುಗಳ ತುಂಡರಿಸಿ
ಮಣ್ಣಮಕ್ಕಳ ಊತುಹಾಕುವರು ಇಲ್ಲಿ

ಕವಿ ಸಾಯುತ್ತಾನೆ
ಇಂದಲ್ಲ ನಾಳೆ
ಕವಿತೆ…!?
ಕವಿತೆಗೆ ಸಾವಿಲ್ಲ
ಮತ್ತೆ ಹುಟ್ಟುತ್ತದೆ
ಬೆಂದವರ ಬೆರಳ ತುದಿಯಲ್ಲಿ
ಪಂಪ ಕವಿ ಪೇಳ್ದಂತೆ
ಈ ಕಾವ್ಯಂ ನಿತ್ಯಂ ಪೊಸತು.


– ಡಾ. ಬಿ ಆರ್. ಕೃಷ್ಣಕುಮಾರ್, ಚಾಮರಾಜ ನಗರ
*****