ಅನುದಿನ‌ ಕವನ-೭೯೮, ಕವಿ: ಡಾ.‌ಎಸ್.‌ಮಂಜುನಾಥ, ಬಳ್ಳಾರಿ, ಕವನದ ಶೀರ್ಷಿಕೆ: ಬಳ್ಳಾರಿಯಂದರೆ…..

ಹಲವು ವರ್ಷಗಳಿಂದ ಸಾಮಾಜಿಕ‌ ಜಾಲತಾಣಗಳಲ್ಲಿ ಯರ್ಯಾರೋ ಹೆಸರಿನಲ್ಲಿ ಪ್ರಕಟವಾಗುತ್ತಿರುವ ‘ಬಳ್ಳಾರಿಯಂದರೆ…..’ ಕವನದ ಮೂಲ ಕವಿ ಅಖಂಡ ಬಳ್ಳಾರಿ ಜಿಲ್ಲೆಯ ಯುವ ಕವಿ, ವಿಜ್ಞಾನ ಲೇಖಕ, ಉಪನ್ಯಾಸಕ, ಖಗೋಳ ಸಂಶೋಧಕ ಡಾ. ಎಸ್. ಮಂಜುನಾಥ ಅವರು!
ಚುಕ್ಕಿ ಚಂದ್ರಮ‌ ಕವನ ಸಂಕಲನ ಸೇರಿದಂತೆ ಸುಮಾರು ಹತ್ತು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿರುವ ಡಾ. ಮಂಜುನಾಥ ಅವರ
ಈ ಕವಿತೆಯನ್ನು “ಬೆಂಕಿ ಬಾಣಲೆ” ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.👇

ಬಳ್ಳಾರಿಯಂದರೆ…

ಬಳ್ಳಾರಿಯಂದರೆ…
ಬರೀ ರಣಬಿಸಿಲಲ್ಲ
ತಂಪು ಸೊಂಪಾಗಿ ಹರಿಯುವ
ತುಂಗ-ಭದ್ರೆಯರನೂ ನೋಡಾ!

ಬಳ್ಳಾರಿಯಂದರೆ…
ಬರೀ ಧೂಳು ಗಣಿಯಲ್ಲ
ಮಾತನಾಡುವ ಚಂದದ
ಗಿಣಿಗಳನೂ ನೋಡಾ!

ಬಳ್ಳಾರಿಯಂದರೆ…
ಬರೀ ಮುಳ್ಳು ಜಾಲಿಯಲ್ಲ
‘ಜಾಲಿ’ಯಾಗಿ ಹಾಡುವ
ಕೋಗಿಲೆಗಳನೂ ನೋಡಾ!

ಬಳ್ಳಾರಿಯಂದರೆ…
ಬರೀ ಧರಿಸುವ ‘ಜೀನ್ಸ್’ ಬಟ್ಟೆಯಲ್ಲ
ಕೋಟೆ-ಕೊತ್ತಲಿನ
ಏಕ ಶಿಲಾ ಬೆಟ್ಟ ನೋಡಾ!

ಬಳ್ಳಾರಿಯಂದರೆ…
ಬರೀ ‘ಸೆಂಟ್ರಲ್ ಜೈಲ್’ ಅಲ್ಲ
ಜಯದ ನಗೆ ಬೀರಿರುವ
ಸಾಧಕರನೂ ನೋಡಾ!


-ಡಾ.ಎಸ್.‌ಮಂಜುನಾಥ, ಬಳ್ಳಾರಿ                                *****                                                      [ಸಂಜೆಯ ಕೋಟೆ ಚಿತ್ರ: ಟಿ.ರಾಜನ್, ಬಳ್ಳಾರಿ]
*****