ಮೈಸೂರು, ಮಾ.11: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ, ಮಾಜಿ ಸಂಸದ, ಮಾಜಿ ಶಾಸಕ ಆರ್.ಧ್ರುವ ನಾರಾಯಣ ಅವರು ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಎದೆ ನೋವು ಕಾಣಿಸಿಕೊಂಡಿದೆ ಎಂದು ಬೆಳಿಗ್ಗೆ 6.30ಕ್ಕೆ ಚಾಲಕನಿಗೆ ಕರೆ ಮಾಡಿದ್ದರು. ಚಾಲಕ ತಕ್ಷಣ ಬಂದು ಮೈಸೂರಿನ ಡಿಆರ್ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಬರುವ ವಿಧಾನಸಭಾ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆಂದೇ ಹೇಳಲಾಗುತ್ತಿತ್ತು.
ಚಾಮರಾಜನಗರ ಲೋಕಸಭೆಯನ್ನು ಪ್ರತಿನಿಧಿಸಿ ಎರಡು ಭಾರಿ ಸಂಸದರಾಗಿದ್ದ ಅವರು ಅತ್ಯುತ್ತಮ ಲೋಕಸಭಾ ಸದಸ್ಯರಾಗಿ ಗುರುತಿಸಿಕೊಂಡಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ವಿ.ಶ್ರೀನಿವಾಸ ಪ್ರಸಾದ್ ಅವರ ವಿರುದ್ಧ ಸೋತಿದ್ದರು.
2004ರಲ್ಲಿ ಸಂತೇಮರಹಳ್ಳಿ ವಿಧಾನ ಸಭಾ ಕ್ಷೇತ್ರ ಹಾಗೂ 2008ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಗಳಿಂದ ಸತತ ಎರಡು ಬಾರಿ ಶಾಸಕರಾಗಿ ಜಯ ಗಳಿಸಿದ್ದರು. 1999ರಲ್ಲಿ ಸಂತೇಮರಹಳ್ಳಿ ಕ್ಷೇತ್ರದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಎ.ಆರ್. ಕೃಷ್ಣಮೂರ್ತಿ ಅವರ ಎದುರು ಪರಾಜಿತರಾದರು. ಬಳಿಕ ಕೃಷ್ಣಮೂರ್ತಿ ಅವರನ್ನು 2004ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 1 ಮತದಿಂದ ಧ್ರುವನಾರಾಯಣ್ ಸೋಲಿಸಿದ್ದರು.
2009 ಹಾಗೂ 2014ರ ಲೋಕಸಭಾ ಚುನಾವಣೆಯಲ್ಲಿ ಕೂಡ ಕೃಷ್ಣಮೂರ್ತಿ ಅವರನ್ನು ಸೋಲಿಸಿ ಸಂಸದರಾಗಿದ್ದರು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಕೃಷಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದಿದ್ದರು. ಚಾಮರಾಜನಗರ ಜಿಲ್ಲೆಯ ರಾಜಕಾರಣದಲ್ಲಿ ಸಹೃದಯಿ, ಮೆಲು ಮಾತಿನ ರಾಜಕಾರಣಿ ಗುರುತಿಸಿದ್ದರು.
ಸಿದ್ಧರಾಮಯ್ಯ ಕಂಬನಿ: ಮಾಜಿ ಮುಖ್ಯಮಂತ್ರಿ, ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಧೃವನಾರಾಯಣ ಅವರ ಅಕಾಲಿಕ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಸಿದ್ಧರಾಮಯ್ಯ ಅವರು ತಮ್ಮ ಶೋಕ ಸಂದೇಶದಲ್ಲಿ ನನ್ನ ಆತ್ಮೀಯರಾದ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಮಾಜಿ ಸಂಸದ ಆರ್. ಧ್ರುವನಾರಾಯಣ್ ಅವರ ಹಠಾತ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ.
ಅವರ ಕುಟುಂಬ ಮತ್ತು ಪ್ರೀತಿಪಾತ್ರರ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿಕೋರುತ್ತೇನೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ರಾಜಕೀಯ ನಾಯಕ ಮತ್ತು ಸಂಸದೀಯ ಪಟುವಾಗಿ ತನ್ನ ಶ್ರಮ, ಪ್ರಬುದ್ಧತೆ ಮತ್ತು ಬದ್ಧತೆಯಿಂದ ಅತ್ಯುನ್ನತ ಸ್ಥಾನಕ್ಕೇರುವ ಎಲ್ಲ ಲಕ್ಷಣಗಳನ್ನು ಹೊಂದಿದ್ದ ಧ್ರುವನಾರಾಯಣ್ ಅವರ ಬದುಕು ಅರ್ಧ ದಾರಿಯಲ್ಲಿಯೇ ಕೊನೆಗೊಂಡದ್ದು ನಾಡಿಗೆ ಮತ್ತು ಜನತೆಗೆ ತುಂಬಲಾರದ ನಷ್ಟ. ಅವರ ಸಾಧನೆಯ ಬದುಕು ಶಾಶ್ವತವಾಗಿ ನಮ್ಮ ನೆನಪಲ್ಲಿರುತ್ತದೆ ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ.
*****