ಅನುದಿನ ಕವನ-೮೦೨, ಕವಿ: ದಯಾನಂದ, ಬೆಂಗಳೂರು, ಕವನದ ಶೀರ್ಷಿಕೆ: ಫ್ರಾನ್ಸ್ ಮತ್ತು ಕಾವ್ಯ

ಫ್ರಾನ್ಸ್ ಮತ್ತು ಕಾವ್ಯ

ಬೋದಿಲೇರ್ ಹೇಳಿದ
‘ಫ್ರಾನ್ಸ್ ಗೆ ಕಾವ್ಯವೆಂದರೆ ಭಯ,
ಫ್ರಾನ್ಸ್ ಕವಿಯಿಂದ ನಿರೀಕ್ಷಿಸುವುದು
ವ್ಯಾಕರಣ ಮತ್ತು ಕಾಗುಣಿತದ ಪರಿಶುದ್ಧತೆಯನ್ನು ಮಾತ್ರ’

ಸೂಳೆಗೇರಿಯಲ್ಲಿ
ಅಲೆಯುತ್ತಿದ್ದ ಬೋದಿಲೇರ್ ಗೆ
ಜೀನ್ ದುವಾಲ್ ಸಿಕ್ಕಳು
ಅವಳ ಎದೆ ನಿತಂಬ ತೊಡೆ ತೋಳಲ್ಲಿ
ಪಾಪದ ಹೂಗಳು
ಬಿರಿಯುವುದ ಕಂಡ
ಬೋದಿಲೇರ್ ನ
ವ್ಯಾಮೋಹವನ್ನು
ಜೀನ್ ದ್ವೇಷಿಸಿದಳು

ಕನ್ನಡಿಯನ್ನು ಒರೆಸುತ್ತಾ
ಕುಂತ ಬೋದಿಲೇರ್ ನ
ಮುಖ ಅಳಿಸಿ ಹೋಯಿತು
ಸತ್ಯದ ಹೊಗೆಯಲ್ಲಿ
ಅವನ ಉಸಿರು ಬಿಗಿಯಿತು

ಫ್ರಾನ್ಸ್ ಮತ್ತು ಜೀನ್
ಇಬ್ಬರಿಗೂ
ಬೋದಿಲೇರ್ ಅರ್ಥವಾಗಲೇ ಇಲ್ಲ

-ದಯಾನಂದ, ಬೆಂಗಳೂರು

(2015ರಲ್ಲಿ ರಚಿಸಿದ ಕವಿತೆ)
*****