ಬಳ್ಳಾರಿ, ಮಾ.15: ಯಶಸ್ಸು ಸೋಮಾರಿಗಳ ಸ್ವತ್ತಲ್ಲ, ಶ್ರಮ ಪಟ್ಟರೆ ಯಶಸ್ಸು ಖಂಡಿತಾ ಸಾಧ್ಯ ಎಂದು
ಅಪರ ಜಿಲ್ಲಾಧಿಕಾರಿಗಳು ಪಿ.ಎಸ್.ಮಂಜುನಾಥ್ ಅವರು ಹೇಳಿದರು.
ನಗರದ ಸನ್ಮಾರ್ಗ ಗೆಳೆಯರ ಬಳಗ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪೂರ್ವ ವಲಯ ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ಶ್ರೀ ಬಾಲಾಂಜನೇಯ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ 2022-23 ನೇ ಸಾಲಿನ ಎಸ್.ಎಸ್.ಎಲ್.ಸಿ.ಮಕ್ಕಳಿಗೆ ಪರೀಕ್ಷೆ ಪೂರ್ವ ಸಿದ್ಧತಾ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದಲ್ಲಿ ಯಶಸ್ಸು ಗಳಿಸಬೇಕಾದರೆ ಪ್ರತಿಯೊಬ್ಬರೂ ಪರಿಶ್ರಮ ಹಾಕಲೇ ಬೇಕು ಎಂದು ತಿಳಿಸಿದರು.
ಎಸ್.ಎಸ್.ಎಲ್.ಸಿ.ಮಕ್ಕಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ಕಾರ್ಯಾಗಾರಗಳನ್ನು ಉಚಿತವಾಗಿ ನಡೆಸಿಕೊಂಡು ಬರುತ್ತಿರುವ ಸನ್ಮಾರ್ಗ ಗೆಳೆಯರ ಬಳಗದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ನಟರಾಜ್ ಅವರು ಮಾತನಾಡಿ ವಿದ್ಯೆಗೆ ವಿನಯವೇ ಭೂಷಣದಂತೆ ಸಾಧನೆಗೆ ಶ್ರದ್ಧೆಯೇ ಭೂಷಣ ಎಂದು ಹೇಳಿದರು.
ಬಿಇಓ ಕೆಂಪಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸನ್ಮಾರ್ಗ ಗೆಳೆಯರ ಬಳಗದ ಉಪಾಧ್ಯಕ್ಷರಾದ ಎಂ.ಎಸ್.ಜಿ.ಜಗದೀಶ್, ಸಲ್ಲಾ ಹನುಮಂತ ರೆಡ್ಡಿ, ಪ್ರೌಢಶಾಲಾ ಸಹ ಶಿಕ್ಷಕರ ತಾಲೂಕು ಘಟಕದ ಅಧ್ಯಕ್ಷ ರಾದ ಗಿರಿಮಲ್ಲಪ್ಪ , ಟಿಪಿಇಒ ವೀರನಗೌಡ , ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಕಪ್ಪಗಲ್ ಚಂದ್ರಶೇಖರ್ ಆಚಾರ್, ಬಳ್ಳಾರಿ ತಾಲ್ಲೂಕು ಎಸ್.ಎಸ್.ಎಲ್.ಸಿ.ನೋಡೆಲ್ ಅಧಿಕಾರಿ ಗೂಳೆಪ್ಪ ಬೆಳ್ಳೆಕಟ್ಟೆ , ಮುಖ್ಯ ಶಿಕ್ಷಕ ಮೆಹತಾಬ್ ,ಜಾನಪದ ಕಲಾವಿದರಾದ ಜಡೇಶ್ ಎಮ್ಮಿಗನೂರು, ತೇಜ ರಘುರಾಮರಾವ ಭಂಡಾರಿ ಅಶೋಕ್ ಮುಂತಾದವರು ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪುರುಷೋತ್ತಮ್, ಹರಿಪ್ರಸಾದ್, ಸಿದ್ದಲಿಂಗೇಶ್ವರ ಗದುಗಿನ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಸಿ.ಆರ್.ಪಿ.ಎರ್ರಿಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭ: ಸಂಜೆ ಜರುಗಿದ ಸಮಾರೋಪ ಸಮಾರಂಭದಲ್ಲಿ ನೂತನ ಬಿಇಓ ನಯೀಮುರ್ ರಹಮಾನ್ .ಕೆ ಎಸ್ ಅವರು ಮಾತನಾಡಿ ಪರೀಕ್ಷೆ ಎಂಬುದು ಒಂದು ಹಬ್ಬ ಎಂದು ಸಂಭ್ರಮಿಸಿ, ಯಾವುದೇ ರೀತಿಯ ಭಯ ಮತ್ತು ಆತಂಕವಿಲ್ಲದೆ ಆತ್ಮವಿಶ್ವಾಸ ದಿಂದ ಪರೀಕ್ಷೆ ಬರೆಯಬೇಕು ಎಂದು ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬಿದರು.
*****