ಹೊರಬಿದ್ದ ಬಿಂದು
ನಾಳೆಯ ಆಗಮನಕ್ಕೆ
ಏನೆಲ್ಲಾ ಕೋಮಲದ ಕನಸು
ಆ ಕನಸ ನಿರ್ಮಲ ಪ್ರೀತಿಗೆ
ಮುಳ್ಳ ಸಾವಿನ ಸರಹದ್ದಿನ
ಮೆಟ್ಟಿಲು…
ಬಾರದ ದೇಹಕ್ಕೆ,,ಪುಷ್ಪ ಅಪ್ಪಿ
ಘಮ್ಯವಾಗಿದೆ
ಮಣ್ಣ ಗುಟ್ಟೆಯ ಮೇಲೆ
ಸೇರಿದೆ, ಸಿಹಿ,ಉಪ್ಪು,ಹುಳಿ
ಖಾರದ ಜಾತಿ ಖಾದ್ದ್ಯಗಳು…
ಇದು ಹಿಂದುಳಿದ ವರ್ಗದ
ಪ್ರಣಾಳಿಕೆಯೊ ಅಥವಾ
ಜಾತಿ ವೈಷಮ್ಯದ ಪರಿವೋ?
ಅರಿಯೆ….
ವಿಚಾರಗಳ ಸುತ್ತ
ಪ್ರಶ್ನೆಗಳ ಕಾವಲು?
ಮಣ್ಣ ಎದೆಯ ಭಾದೆಯ
ತಿನಿಸಿಗೆ ಮಡುಗಟ್ಟಿದೆ
ಕಣ್ಣೀರ ಬಿಂದು
ಕಣ್ಣ ಸ್ವಚ್ಚತೆಗೆ ಉಸಿರು
ಕೊಡುತ್ತಿದೆ…..
ಮುಗಿದ ದೇಹಕ್ಕೆ ಬೇಡುವುದೆ
ನಿಯಮದ ಪರಿಕರ?
ಋಣಕ್ಕೆ ತಲೆ ಬಾಗಿದ ಹೆಗಲಿಗೆ
ಮಡಕೆಯ ಕುಡುಗೋಲು
ಮುಕ್ತಾಯದ ಹಂತ ಹೇಳುವುದೇ?….
ಸುತ್ತಲೂ ಪ್ರಶ್ನೆಯ ಒಡಲು…
ಹೇ ಜಗದೋದ್ಧಾರಕನೆ
ದೇಹದ ಸದ್ಗತಿಗೆ
ಕೂಡಿಕೊಳ್ಳುತ್ತಿವೆಯೆ
ಸಲ್ಲದ ಆಚರಣೆಯ
ಪ್ರಲಾಪಗಳು…….
-ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ *****